ತಿರುವನಂತಪುರಂ: ಕೇರಳಂನಲ್ಲಿ ಈ ಭಾರಿ ಸಂಭವಿಸಿದ ಪ್ರವಾಹ, ಭೂಕುಸಿತದಲ್ಲಿ ಮೃತರ ಕುಟುಂಬಗಳಿಗೆ ಹಾಗೂ ಆಸ್ತಿ ಕಳೆದುಕೊಂಡು ಸಂಕಷ್ಟದಲ್ಲಿರುವವರಿಗೆ ಮುಖ್ಯಮಂತ್ರಿ ವಿ. ಡಿ. ಸತೀಶನ್ ಅವರು ಪರಿಹಾರ ಘೋಷಿಸಿದ್ದಾರೆ.
ಭೂಕುಸಿತದಲ್ಲಿ ಮೃತರ ಕುಟುಂಬಗಳಿಗೆ ₹8 ಲಕ್ಷ ಪರಿಹಾರ ನೀಡಲಾಗುವುದು.
ಇದರಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ₹4 ಲಕ್ಷ ಹಾಗೂ ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಯಿಂದ ₹2ಲಕ್ಷ, ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ₹2 ಲಕ್ಷ ಒಳಗೊಂಡಿವೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು, 'ಮಳೆಗಾಲದಲ್ಲಿ ಈ ಭಾರಿ ಸಂಭವಿಸಿದ ಭೂಕುಸಿತದಲ್ಲಿ ಇದುವರೆಗೂ 26 ಜನರು ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ. ನಾಲ್ವರು ನಾಪತ್ತೆಯಾಗಿದ್ದಾರೆ. ಈ ಸಂಬಂಧ ರಾಜ್ಯದಾದ್ಯಂತ 462 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಪತ್ತನಂತಿಟ್ಟನಲ್ಲಿ 157 ಕಾಳಜಿ ಕೇಂದ್ರಗಳು, ಕೊಟ್ಟಾಯಂನಲ್ಲಿ 154, ಆಲಪ್ಪುಳ 81 ಕಾಳಜಿ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಭಾರಿ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಸ್ಥಳಾಂತರಗೊಂಡ ಸುಮಾರು 27 ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಇಲ್ಲಿ ಆಶ್ರಯ ಒದಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಹ, ಭೂಕುಸಿತದಲ್ಲಿ 1,882 ಹೆಕ್ಟೇರ್ ಕೃಷಿಭೂಮಿಯ ಬೆಳೆ ಹಾನಿಯಾಗಿ 23 ಸಾವಿರಕ್ಕೂ ಅಧಿಕ ರೈತರ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

