ಕುಂಬಳೆ: ಪುತ್ತಿಗೆ ಪಂಚಾಯತಿ ಆಡಳಿತ ಪಕ್ಷಪಾತ ನೀತಿ ಅನುಸರಿಸುತ್ತಿದೆಯೆಂದು ಆರೋಪಿಸಿ ಎಲ್‍ಡಿಎಫ್ ಪಂಚಾಯತಿ ಕಚೇರಿಗೆ ಶುಕ್ರವಾರ ಮಾರ್ಚ್ ನಡೆಸಿತು. ಪಂಚಾಯತಿಗಳಿಗೆ ಲಭಿಸಬೇಕಾದ ಯೋಜನೆ ಮೊತ್ತವನ್ನು ಸರ್ಕಾರ ಬುಡಮೇಲುಗೊಳಿಸಿದೆ. ಕಳೆದ ಪಂಚಾಯತಿ ಆಡಳಿತ ಸಮಿತಿ ಸ್ಥಾಪಿಸಿದ ಮಿನಿ ಮಾಸ್ಟ್ ಲೈಟ್‍ಗಳಿಗೆ ವಿದ್ಯುತ್ ಸಂಪರ್ಕ ನೀಡದಿರುವುದು ಹಾಗೂ ಎಡರಂಗ ಸದಸ್ಯರ ವಾರ್ಡ್‍ಗಳಿಗೆ ಯೋಜನೆ ಮಂಜೂರು ಮಾಡದಿರುವುದನ್ನು ಪ್ರತಿಭಟಿಸಿ ಮಾರ್ಚ್ ನಡೆಸಲಾಗಿದೆ. ಏರಿಯಾ ಕಾರ್ಯದರ್ಶಿ ಸಿ.ಎ. ಸುಬೈರ್ ಉದ್ಘಾಟಿಸಿದರು. ಕೃಷ್ಣ ಆಳ್ವ, ಡಿ.ಎನ್. ರಾಧಾಕೃಷ್ಣ, ವಿಠಲ ರೈ, ಜಯಂತಿ, ಶಂಕರ ರೈ, ಅನಿತಾ, ಶಿವಪ್ಪ ರೈ, ಅಬ್ದುಲ್ ಮಜೀದ್, ಲಲಿತಾ, ರೂಪಾ ವಿ, ಬಶೀರ್ ಕೊಟ್ಟೂಡಲ್, ಸಂತೋಷ್ ಕುಮಾರ್ ನೇತೃತ್ವ ನೀಡಿದರು.

