ಮುಂಬೈ: ನಗರದ ಘಾಟ್ಕೋಪರ್ ಪ್ರದೇಶದಲ್ಲಿ ಬುಧವಾರ ಸುರಿದ ಅತಿಯಾದ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಏಳು ಜನ ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಕ್ಕಳಿದ್ದಾರೆ.
ಗೌಸಿಯಾ ಚಾಲ್‌ನ ಅಶೋಕ ನಗರ ವಸತಿ ಪ್ರದೇಶದ ಚಿರಾಗ್ ನಗರದಲ್ಲಿ ಬೆಳಗಿನ ಜಾವ 3.48 ರ ಸುಮಾರಿಗೆ ಭೂಕುಸಿತ ಸಂಭವಿಸಿದೆ ಎಂದು ವರದಿಯಾಗಿದೆ.
ಘಾಟ್ಕೋಪರ್‌ನ ರಾಜವಾಡಿ ಆಸ್ಪತ್ರೆ ಅಧಿಕಾರಿಗಳು ಮೃತಪಟ್ಟವರ ಮಾಹಿತಿ ನೀಡಿದ್ದಾರೆ.
ಘಟನೆ ಸಂಭವಿಸಿದ ಪ್ರದೇಶವು ತೀರಾ ಕಡಿದಾಗಿದ್ದು, ಒಬ್ಬ ವ್ಯಕ್ತಿ ಮಾತ್ರ ಸಾಗಬಹುದಾಗಿದೆ. ಬೃಹತ್ ಯಂತ್ರಗಳ ಸಾಗಣೆ ಕಷ್ಟಕರವಾಗಿದ್ದು, ರಕ್ಷಣಾ ಕಾರ್ಯಾಚರಣೆಯು ಸವಾಲಿನದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ಮಹಾನಗರ ಪಾಲಿಕೆಯ ಮೇಯರ್ ರಿತು ತಾವಡೆ ಅವರು ಮೃತರ ಕುಟುಂಬಗಳಿಗೆ ತಲಾ ₹4 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ ₹50 ಸಾವಿರ ಪರಿಹಾರ ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ಘೋಷಿಸಿದ್ದಾರೆ. ರಕ್ಷಣಾ ಪಡೆಗಳಿಗೆ ತ್ವರಿತ ಕಾರ್ಯಾಚರಣೆ ನಡೆಸುವಂತೆ ಕರೆ ನೀಡಿದ್ದಾರೆ.

