ಇಸ್ಲಾಮಾಬಾದ್: ಪಾಕಿಸ್ತಾನ ಸರ್ಕಾರವು, ದೇಶದ ಮೂರು ಪ್ರಮುಖ ನಗರಗಳನ್ನು ಹೊರತುಪಡಿಸಿ ಇತರೆಡೆಗಳಲ್ಲಿ ವರದಿ ಮಾಡಲು ಬಯಸುವ ಅಂತರರಾಷ್ಟ್ರೀಯ ಮಾಧ್ಯಮಗಳಿಗೆ ನೋಂದಣಿ ಹಾಗೂ ಸರ್ಕಾರದ ಪೂರ್ವಾನುಮತಿಯನ್ನು ಕಡ್ಡಾಯಗೊಳಿಸಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ಚುನಾವಣೆಗಳ ಕುರಿತು ಕೆಲವು ವಿದೇಶಿ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ.
ಸರ್ಕಾರದ ಈ ನಡೆ ಮಾಧ್ಯಮ ಮತ್ತು ಮಾನವ ಹಕ್ಕುಗಳ ಸಂಘಟನೆಗಳ ತೀವ್ರ ಕಳವಳಕ್ಕೆ ಕಾರಣವಾಗಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯಕ್ಕೆ ಎದುರಾಗಿರುವ ಬೆದರಿಕೆ ಎಂದು ಬಣ್ಣಿಸಿವೆ.
ಇಸ್ಲಾಮಾಬಾದ್, ಲಾಹೋರ್ ಹಾಗೂ ಕರಾಚಿ ನಗರಗಳ ಹೊರಗಡೆ ವರದಿಗಾರಿಕೆ ಮಾಡಲು ಇಚ್ಛಿಸುವ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳು ಸರ್ಕಾರದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯ ಎಂದು ಪಾಕಿಸ್ತಾನದ ಮಾಹಿತಿ ಸಚಿವಾಲಯ ತಿಳಿಸಿದೆ.
ನೂತನ ಮಾರ್ಗಸೂಚಿ ಪ್ರಕಾರ, ಫ್ರೀಲ್ಯಾನ್ಸ್ ಪತ್ರಕರ್ತರು ಸೇರಿದಂತೆ ಅಂತಾರರಾಷ್ಟ್ರೀಯ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲಾ ವರದಿಗಾರರು ಸರ್ಕಾರದ ಬಾಹ್ಯ ಮಾಧ್ಯಮ ವಿಭಾಗದಲ್ಲಿ ನೋಂದಾಯಿಸಿಕೊಳ್ಳಬೇಕು.
ವಿದೇಶಿ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರು ಇಸ್ಲಾಮಾಬಾದ್, ಲಾಹೋರ್ ಮತ್ತು ಕರಾಚಿ ನಗರಗಳನ್ನು ಹೊರತುಪಡಿಸಿ, ದೇಶದ ಇತರ ಯಾವುದೇ ನಗರಗಳಿಗೆ ವರದಿ ಮಾಡಲು ತೆರಳಲು ಎನ್‌ಒಸಿ ಪಡೆಯುವುದು ಕಡ್ಡಾಯವಾಗಿದೆ.
ಪಾಕಿಸ್ತಾನದ ಸಿದ್ಧಾಂತ, ಸಾರ್ವಭೌಮತ್ವ, ಭದ್ರತೆ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಂಡುಬಂದರೆ, ಯಾವುದೇ ಹಂತದಲ್ಲಾದರೂ ಪತ್ರಕರ್ತರ ಪತ್ರಿಕಾ ನೋಂದಣಿಯನ್ನು ಅಮಾನತುಗೊಳಿಸುವ ಅಥವಾ ರದ್ದುಗೊಳಿಸುವ ಅಧಿಕಾರವನ್ನು ಈ ಮಾರ್ಗಸೂಚಿಯು ಸರ್ಕಾರಕ್ಕೆ ನೀಡುತ್ತದೆ.
ಈ ನಿಯಮದ ಪ್ರಕಾರ, ವಿದೇಶಿ ಮಾಧ್ಯಮಗಳಿಗೆ ನೆರವಾಗುವ ಸ್ಥಳೀಯ ಪತ್ರಕರ್ತರೂ ಯಾವುದೇ ಸುದ್ದಿ ವರದಿ ಮಾಡುವ ಮೊದಲು ಎನ್‌ಒಸಿ ಪಡೆಯುವುದು ಕಡ್ಡಾಯವಾಗಿದೆ.
ಏತನ್ಮಧ್ಯೆ ಸ್ಥಳೀಯ ಮಾಧ್ಯಮಗಳು ಹಾಗೂ ಮಾನವ ಹಕ್ಕುಗಳ ಸಂಘಟನೆಗಳು ಈ ಕಟ್ಟುನಿಟ್ಟಿನ ನಿಯಮಗಳನ್ನು ತಕ್ಷಣವೇ ಹಿಂಪಡೆಯಬೇಕೆಂದು ಆಗ್ರಹಿಸಿವೆ.
ಪ್ರಧಾನಿ ಶೆಹಬಾಜ್ ಶರೀಫ್ ಸರ್ಕಾರದ ಈ ಕ್ರಮವು ಮಾಧ್ಯಮ ಸ್ವಾತಂತ್ರ್ಯದ ಮೇಲಿನ ದಾಳಿಯಾಗಿದೆ ಎಂದು ಪಾಕಿಸ್ತಾನ ಫೆಡರಲ್ ಯೂನಿಯನ್ ಆಫ್ ಜರ್ನಲಿಸ್ಟ್ಸ್ (ಪಿಎಫ್‌ಯುಜೆ), ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗ (ಹೆಚ್‌ಆರ್‌ಸಿಪಿ) ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆತಂಕ ವ್ಯಕ್ತಪಡಿಸಿವೆ.
25 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದಲ್ಲಿ ಭದ್ರತೆ, ಪರಿಸರ ಹಾಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಪ್ರಮುಖ ಘಟನೆಗಳು ಹೆಚ್ಚಾಗಿ ಈ ಮೂರು ನಗರಗಳ ಹೊರಗಿನ ಪ್ರದೇಶಗಳಲ್ಲೇ ಸಂಭವಿಸುತ್ತವೆ. ಹಾಗಿರುವಾಗ ಹೊಸ ನಿಯಮಗಳು ಮುಕ್ತ ವರದಿಗಾರಿಕೆಗೆ ಅಡ್ಡಿಯಾಗಲಿವೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.
ಮಾಧ್ಯಮ ಸ್ವಾತಂತ್ರ್ಯದ ಕೆಟ್ಟ ದಾಖಲೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಈಗಾಗಲೇ ತಳಮಟ್ಟದಲ್ಲಿದೆ. ಸರ್ಕಾರದ ಈ ನಿರ್ಧಾರ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ ಎಂದು ಪಿಎಫ್‌ಯುಜೆ ಹೇಳಿದೆ.

