ನವದೆಹಲಿ:ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡದ ಕಾಂಗ್ರೆಸ್, ದೇಶ ವಿರೋಧಿಯಾಗಿದೆ ಎಂದು ಕಿಡಿಕಾರಿದ್ದ ಗೃಹಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, 'ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಥವಾ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ವಂದೇ ಮಾತರಂ ಅನ್ನು ಪೂರ್ಣ ಹಾಡಿದ್ದರೇ' ಎಂದು ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡಲು ನಿರಾಕರಿಸಿರುವ ಕಾಂಗ್ರೆಸ್, ಮೊದಲಿನಂತೆ ಮೊದಲ ಎರಡು ಚರಣ ಹಾಡುತ್ತೇವೆ ಎಂದು ಕಾರ್ಯಕಾರಿ ಸಮಿತಿಯಲ್ಲಿ ನಿರ್ಧಾರ ಪ್ರಕಟಿಸಿತ್ತು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಪಿಲ್ ಸಿಬಲ್, 'ವಂದೇ ಮಾತರಂ ಅನ್ನು ಸಂಪೂರ್ಣವಾಗಿ ಹಾಡದ ಬಿಜೆಪಿ ನಾಯಕರು ಕೂಡ ದೇಶ ದ್ರೋಹಿಗಳಾ?, ಅವರು 1950ರಿಂದ ಪಕ್ಷದ ಖಾಸಗಿ ಮತ್ತು ಅಧಿಕೃತ ಕಾರ್ಯಕ್ರಮಗಳಲ್ಲಿ ರಾಷ್ಟ್ರೀಯ ಗೀತೆಯ ಎಲ್ಲ ಚರಣಗಳನ್ನು ಹಾಡಿದ್ದಾರೆಯೇ?' ಎಂದು ಪ್ರಶ್ನಿಸಿದ್ದರು.
ಹಾಗಾದರೆ ಬಿಜೆಪಿಯವರು ದೇಶ ದ್ರೋಹಿಗಳಾ?, ಇದು ನಿಮ್ಮ ವೋಟ್ ಬ್ಯಾಂಕ್ ರಾಜಕೀಯವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರನ್ನು 'ಕಪಟ ರಾಷ್ಟ್ರವಾದಿಗಳು' ಎಂದು ಕರೆದಿದ್ದರು.

