ಕಾಸರಗೋಡು: ಬಸವಣ್ಣ ಮತ್ತು ಕನಕದಾಸರು ಜಾತಿ ತಾರತಮ್ಯ, ಸಾಮಾಜಿಕ ಅಸಮಾನತೆ, ಮೂಢನಂಬಿಕೆ, ಕಂದಾಚಾರಗಳನ್ನು ವಿರೋಧಿಸಿದ ಕನ್ನಡ ಕಾವ್ಯ ಪರಂಪರೆಯ ಇಬ್ಬರು ಮಹಾನ್ ದಾರ್ಶನಿಕರಾಗಿದ್ದಾರೆ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ, ಖ್ಯಾತ ಸಾಹಿತಿ ಕಾ. ತ. ಚಿಕ್ಕಣ್ಣ ತಿಳಿಸಿದ್ದಾರೆ.
ಅವರು ಕಾಸರಗೋಡು ಸರ್ಕಾರಿ ಕಾಲೇಜಿನ ಸಭಾಂಗಣದಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರ ಬೆಂಗಳೂರು ಹಾಗೂ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಯೋಗದಲ್ಲಿ 'ಬಸವಣ್ಣ ಮತ್ತು ಕನಕದಾಸರು: ತೌಲನಿಕ ನೋಟ' ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ತಮ್ಮ ಕಾಲಾವಧಿಯಲ್ಲಿ ಸಮಾಜದ ಅನೇಕ ಸಮಸ್ಯೆಗಳಿಗೆ ಅವರು ಮುಖಾಮುಖಿಯಾದರು. ಅವರು ತಮ್ಮ ಸಾಹಿತ್ಯದಲ್ಲಿ ಅವುಗಳನ್ನು ನಿರ್ವಹಿಸಿದ ಬಗೆ ಅದ್ಭುತವಾಗಿದೆ. ಬಸವಣ್ಣ ಮತ್ತು ಕನಕದಾಸರು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಲು ಅರಿವಿನ ದೀಪವನ್ನು ಹಚ್ಚಿದರು. ಅವರ ಸಾಹಿತ್ಯದಲ್ಲಿ ಪಾಂಡಿತ್ಯಕ್ಕಿಂತ ಸರಳತೆ ಮುಖ್ಯವಾಗಿದೆ. ಅವರ ನಡೆ ಮತ್ತು ನುಡಿಗಳು ಒಂದೇ ಆಗಿದ್ದುವು. ಅವರು ಬದುಕನ್ನು ಕಂಡ ಬಗೆ ಅನ್ಯಾದೃಶವಾದುದು. ಅವರು ಭಾಷೆ ಮತ್ತು ಸಂಸ್ಕøತಿಯ ಮೂಲಕ ಚರಿತ್ರೆಯನ್ನು ಕಟ್ಟಿರುವುದಾಗಿ ತಿಳಿಸಿದರು.
ಕಾಲೇಜು ಪ್ರಾಂಶುಪಾಲ ಡಾ. ವಿ.ಎಸ್. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತಾ ಎಸ್ ಸ್ವಾಗತಿಸಿದರು. ಡಾ. ಬಾಲಕೃಷ್ಣ ಹೊಸಂಗಡಿ, ಡಾ. ಆಶಾಲತಾ ಸಿ .ಕೆ. ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದ ಅಂಗವಾಗಿ ನಡೆದ ವಿಚಾರ ಸಂಕಿರಣದ ಶೈಕ್ಷಣಿಕ ಗೋಷ್ಠಿಗಳಲ್ಲಿ, 'ಬಸವಣ್ಣ ಮತ್ತು ಕನಕದಾಸರು: ಮಾನವ ಸಂಬಂಧಗಳು' ಎಂಬ ವಿಷಯದಲ್ಲಿ ಮಂಗಳೂರಿನ ಅಲೋಶಿಯಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ದಿನೇಶ್ ನಾಯಕ, 'ಬಸವಣ್ಣ ಮತ್ತು ಕನಕದಾಸರ ಸಾಹಿತ್ಯದಲ್ಲಿ ದೇಸೀ ಮೀಮಾಂಸೆ'ಎಂಬ ವಿಷಯದ ಕುರಿತು ಉಜಿರೆ ಎಸ್ ಡಿ ಎಂ ಕಾಲೇಜಿನ ಪ್ರಾಧ್ಯಾಪಿಕೆ ಡಾ. ಭೋಜಮ್ಮ ಕೆ.ಎನ್ ಹಾಗೂ 'ಬಸವಣ್ಣ-ಕನಕದಾಸರು: ವರ್ತಮಾನದ ನೋಟ'ಎಂಬ ವಿಷಯದ ಕುರಿತು ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಿಕೆ ಡಾ. ಸೌಮ್ಯ ವಿಷಯ ಮಂಡಿಸಿದರು.
ವಿಚಾರ ಸಂಕಿರಣದ ಅಂಗವಾಗಿ ಕಾಸರಗೋಡಿನ ರಂಗ ಚಿನ್ನಾರಿ ತಂಡದಿಂದ ಕೀರ್ತನ ಗಾಯನ ಕಾರ್ಯಕ್ರಮವು ನಡೆಯಿತು. ಅಕ್ಷತಾ ವರ್ಕಾಡಿ, ಬಬಿತ ಆಚಾರ್ಯ ಕಾಸರಗೋಡು, ಗಣೇಶ ನೀರ್ಚಾಲು, ಮಹಾಲಿಂಗಭಟ್ ಧರ್ಮತಡ್ಕ, ದಿನೇಶ ಕೆ ಎಸ್, ಜಗದೀಶ ಉಪ್ಪಳ, ಸ್ವರಾಜ್ ಉಪ್ಪಳ ಕಲಾವಿದರಾಗಿ ಸಹಕರಿಸಿದರು.



