ಜೆರುಸಲೇಂ : ಪಶ್ಚಿಮ ಏಷ್ಯಾ ಸಂಘರ್ಷವನ್ನು ಶಾಶ್ವತವಾಗಿ ಕೊನೆಗೊಳಿಸಲು ಅಮೆರಿಕ-ಇರಾನ್ ನಡುವೆ ಏರ್ಪಟ್ಟಿದ್ದ 60 ದಿನಗಳ ಮಧ್ಯಂತರ ಕದನ ವಿರಾಮ ಒಪ್ಪಂದವು ಸೋಮವಾರ ಮುಕ್ತಾಯಗೊಂಡಿದ್ದು, ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಂಡಿದೆ.
ಒಪ್ಪಂದ ಮುಂದುವರಿಸುವ ಸಂಬಂಧ ಅಥವಾ ಯುದ್ಧ ಕೊನೆಗೊಳಿಸುವ ವಿಷಯವಾಗಿ ಉಭಯ ದೇಶಗಳು ಯಾವುದೇ ಹೇಳಿಕೆ ನೀಡಿಲ್ಲ.
ಜಾಗತಿಕ ಮಾರುಕಟ್ಟೆಗೆ ತೈಲ ಮತ್ತು ಅನಿಲ ಪೂರೈಕೆಯ ಪ್ರಮುಖ ಜಲ ಮಾರ್ಗವಾದ ಹೊರ್ಮುಜ್ ಜಲಸಂಧಿ ಮೇಲೆ ನಿಯಂತ್ರಣ ಸಾಧಿಸುವ ವಿಚಾರದಲ್ಲಿ ಮತ್ತು ಇರಾನ್ ಯುರೇನಿಯಂ ಸಮೃದ್ಧೀಕರಣ ವಿಷಯದಲ್ಲಿ ಉಭಯ ದೇಶಗಳ ನಡುವೆ ಇದುವರೆಗೆ ಒಮ್ಮತ ಮೂಡಿಲ್ಲ. ಇರಾನ್ ಬಂದರಿನ ಮೇಲೆ ಹೇರಿರುವ ದಿಗ್ಬಂಧನವನ್ನು ಅಮೆರಿಕ ಮುಂದುವರಿಸಿರುವುದು ಅಸ್ಥಿರತೆ ಹೆಚ್ಚುವಂತೆ ಮಾಡಿದೆ.
ಪಶ್ಚಿಮ ಏಷ್ಯಾ ಸಂಘರ್ಷ ಆರಂಭಗೊಳ್ಳುವ ಮೊದಲು ಇದ್ದಂತೆ, ಹೊರ್ಮುಜ್ ಜಲಸಂಧಿಯ ಮೇಲಿನ ಸಂಪೂರ್ಣ ನಿಯಂತ್ರಣ ತನಗೆ ಸೇರಿದ್ದು ಎಂದು ಇರಾನ್ ಪ್ರತಿಪಾದಿಸುತ್ತಿದೆ. ಆದರೆ, ಹೊರ್ಮುಜ್ ಜಲಸಂಧಿಯು ಈಗ ಅಮೆರಿಕದ ನಿಯಂತ್ರಣದಲ್ಲಿದೆ ಎಂದು ಅಮೆರಿಕ ಹೇಳುತ್ತಿದೆ. ಹೊರ್ಮುಜ್ ವಿಷಯದಲ್ಲಿ ಎರಡೂ ದೇಶಗಳು ಬಿಗಿಪಟ್ಟು ಮುಂದುವರಿಸಿರುವುದು ಯುದ್ಧ ಕೊನೆಗೊಳಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ರಾಜತಾಂತ್ರಿಕ ಮತ್ತು ಮಧ್ಯಸ್ಥಿಕೆದಾರರ ಪ್ರಯತ್ನಗಳಿಗೆ ಹಿನ್ನಡೆ ಆಗಿದೆ.
ಅಮೆರಿಕ-ಇರಾನ್ ನಡುವೆ ಜೂನ್‌ನಲ್ಲಿ ಮಾಡಿಕೊಳ್ಳಲಾದ ಮಧ್ಯಂತರ ಒಪ್ಪಂದವು ವಿಫಲಗೊಂಡಿರುವುದರಿಂದ, ಮತ್ತೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ, ಅನಿಲ ದರ ಹೆಚ್ಚುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.
ಇಸ್ಮಾಯಿಲ್ ಬಘಾಯಿ ಇರಾನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರಹೊರ್ಮುಜ್ ಜಲಸಂಧಿ ಮೂಲಕ ಹಡಗುಗಳ ಸಂಚಾರ ಶುಲ್ಕಕ್ಕೆ ಸಂಬಂಧಿಸಿ ಇರಾನ್ ಒಮಾನ್ ಜತೆಗೂಡಿ ಸ್ಪಷ್ಟವಾದ ಒಪ್ಪಂದ ಪ್ರಕಟಿಸಲಿದೆ - ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಇರಾನ್ ಬಿಳಿ ಬಾವುಟವನ್ನು ಹಾರಿಸಿ ಶರಣಾಗಬೇಕು. ಹೊರ್ಮುಜ್ ಒಪ್ಪಂದಕ್ಕೆ ಅಡ್ಡಿಪಡಿಸಿದರೆ ಒಮಾನ್ ಮೇಲೆ ಬಾಂಬ್ ಹಾಕುತ್ತೇವೆ 'ಹೊರ್ಮುಜ್ ಜಲಸಂಧಿ ಒಪ್ಪಂದವನ್ನು ಅಂತಿಮಗೊಳಿಸಲು ಇರಾನ್ ಒಮಾನ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಶೀಘ್ರದಲ್ಲೇ ಜಂಟಿ ಹೇಳಿಕೆ ಬಿಡುಗಡೆ ಮಾಡಲಾಗುವುದು' ಎಂದು ಮೂಲಗಳು ಹೇಳಿವೆ. ಹೊರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಪೂರ್ಣವಾಗಿ ತೆರೆಯಬೇಕು ಶುಲ್ಕ ಸೇರಿ ಯಾವುದೇ ನಿರ್ಬಂಧ ಹೇರಬಾರದು ಎಂದು ಅಮೆರಿಕ ಒತ್ತಾಯಿಸುತ್ತಿದೆ. ಆದರೆ ಇರಾನ್ ಪ್ರಸ್ತಾವಿತ ಹೊಸ ಹೊರ್ಮುಜ್ ಒಪ್ಪಂದವು ಅಮೆರಿಕದ ಬೇಡಿಕೆಯನ್ನು ಈಡೇರಿಸಲಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.ಶೀಘ್ರದಲ್ಲೇ ಹೊರ್ಮುಜ್ ಒಪ್ಪಂದ: ಇರಾನ್
ಕಶ್ನರ್- ನೆತನ್ಯಾಹು ಸಭೆ
ಪಶ್ಚಿಮ ಏಷ್ಯಾ ದೇಶಗಳ ಸಂಧಾನಕಾರ ಮತ್ತು ಡೊನಾಲ್ಡ್ ಟ್ರಂಪ್ ಅವರ ಅಳಿಯ ಜರೆಡ್ ಕಶ್ನರ್ ಅವರು ಸೋಮವಾರ ಜೆರುಸಲೇಂನಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸುದೀರ್ಘ ಮಾತುಕತೆ ನಡೆಸಿದರು. ಕಶ್ನರ್ ಅವರು ಭಾನುವಾರ ಈಜಿಪ್ಟ್‌ನಲ್ಲಿ ಹಮಾಸ್ ಮುಖ್ಯಸ್ಥ ಖಲೀಲ್ ಅಲ್ ಹಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅದರ ಬೆನ್ನಲ್ಲೇ ನೆತನ್ಯಾಹು ಅವರೊಂದಿಗೂ ಸಭೆ ನಡೆಸಿದ್ದಾರೆ.
ಗಾಜಾಪಟ್ಟಿಯಲ್ಲಿ ಕದನ ವಿರಾಮ ಮುಂದುವರಿಸಲು ಅಮೆರಿಕ ಮುಂದಿಟ್ಟಿದ್ದ 15 ಅಂಶಗಳ ಪ್ರಸ್ತಾವವನ್ನು ಇಸ್ರೇಲ್ ಇತ್ತೀಚೆಗೆ ತಿರಸ್ಕರಿಸಿತ್ತು. ಹಮಾಸ್ -ಇಸ್ರೇಲ್ ನಡುವಿನ ಯುದ್ಧ ಅಂತ್ಯಗೊಳಿಸಲು ಅಮೆರಿಕ ಮುಂದಿಟ್ಟಿರುವ ಪ್ರಸ್ತಾಪವನ್ನು ಒಪ್ಪಿಕೊಂಡಿರುವುದಾಗಿ ಹಮಾಸ್ ಹೇಳಿಕೊಂಡಿದೆ. ಆದರೆ 'ಹಮಾಸ್ ಸಂಪೂರ್ಣ ನಿಶ್ಶಸ್ತ್ರೀಕರಣದ ಹೊರತಾಗಿ ಯಾವುದೇ ಮಾತುಕತೆಗೆ ಸಿದ್ಧವಿಲ್ಲ' ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

