ಇಸ್ಲಾಮಾಬಾದ್ (PTI): ಮಾಜಿ ಪ್ರಧಾನಿ ಇಮ್ರಾನ್ ಖಾನ್ (73) ಅವರನ್ನು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಖಾಸಗಿ ಆಸ್ಪತ್ರೆಯ ವೈದ್ಯರೂ ಸ್ಥಳದಲ್ಲಿ ಇದ್ದರು ಎಂದು ಸರ್ಕಾರ ತಿಳಿಸಿದೆ.
ವೈದ್ಯಕೀಯ ಪರೀಕ್ಷೆ ಬಳಿಕ ಇಮ್ರಾನ್ ಅವರನ್ನು ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಕರೆದೊಯ್ಯಲಾಯಿತು.
ಇಮ್ರಾನ್ ಅವರು 'ಲೆವೆಲ್ 3ಪ್ಲಸ್ ಆಯಂಕ್ಸೈಟಿ' (ತೀವ್ರ ಆತಂಕಕ್ಕೆ ಒಳಗಾಗುವ) ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವೈದ್ಯಕೀಯ ವರದಿಗಳನ್ನು ಸಲ್ಲಿಸಿದ ಬಳಿಕ, ಅವರನ್ನು ಎರಡು ದಿನಗಳ ಒಳಗಾಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸುಪ್ರೀಂ ಕೋರ್ಟ್ ಈಚೆಗೆ ಆದೇಶಿಸಿತ್ತು.
'ಮಾರ್ಗ ಮಧ್ಯದಲ್ಲಿ ಮತ್ತು ಶಿಫಾ ಆಸ್ಪತ್ರೆಯಲ್ಲಿ ಪಿಟಿಐ ಪಕ್ಷದ ಕಾರ್ಯಕರ್ತರು ಭದ್ರತೆಗೆ ಬೆದರಿಕೆಯನ್ನುಂಟು ಮಾಡುವ ಪರಿಸ್ಥಿತಿ ಸೃಷ್ಟಿಸಿದ್ದರಿಂದ ಇಮ್ರಾನ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರು ಆರೋಗ್ಯವಾಗಿ ಇದ್ದಾರೆ ಎಂದು ವೈದ್ಯಕೀಯ ಪರೀಕ್ಷೆಯಲ್ಲಿ ತಿಳಿದು ಬಂದಿದೆ. ಇಮ್ರಾನ್‌ಗೆ ವೈದ್ಯಕೀಯ ನೆರವು ನೀಡುವುದನ್ನು ಸರ್ಕಾರ ಮುಂದುವರಿಸುತ್ತದೆ' ಎಂದು ಮಾಹಿತಿ ಸಚಿವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

