ನವದೆಹಲಿ (PTI): ಗಡಿ ನಿಯಂತ್ರಣ ರೇಖೆ (ಎಲ್‌ಒಸಿ), ವಾಸ್ತವ ಗಡಿ ನಿಯಂತ್ರಣ ರೇಖೆ (ಎಲ್‌ಎಸಿ) ಮತ್ತು ಅಂತರರಾಷ್ಟ್ರೀಯ ಗಡಿಗಳಿಂದ (ಐಬಿ) 1 ಕಿ.ಮೀ. ವ್ಯಾಪ್ತಿಯಲ್ಲಿ ಸೌರ, ಪವನ ಮತ್ತು ಹೈಬ್ರಿಡ್ ಇಂಧನ ಯೋಜನೆಗಳನ್ನು ನಿಷೇಧಿಸಿ ಗೃಹ ಇಲಾಖೆಯ ಆಂತರಿಕ ಭದ್ರತಾ ಘಟಕವು ಮಾರ್ಗಸೂಚಿಗಳನ್ನು ಹೊರಡಿಸಿದೆ.
ಅಲ್ಲದೆ, 'ಭೂ ಗಡಿಗಳನ್ನು ಹಂಚಿಕೊಂಡಿರುವ, ವಿಶೇಷವಾಗಿ ಪಾಕಿಸ್ತಾನ, ಬಾಂಗ್ಲಾದೇಶ, ಚೀನಾ ದೇಶಗಳ ಎಂಜಿನಿಯರ್‌ಗಳು, ಸಿಬ್ಬಂದಿ, ಉದ್ಯೋಗಿಗಳು ಮತ್ತು ಕಾರ್ಮಿಕರನ್ನು ಕೇಂದ್ರ ಸರ್ಕಾರದ ಅನುಮತಿ ಇಲ್ಲದೇ ಯೋಜನೆಗಳ ಅನುಷ್ಠಾನಕ್ಕಾಗಿ ನಿಯೋಜಿಸುವಂತಿಲ್ಲ' ಎಂದೂ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಎಲ್‌ಒಸಿ, ಎಲ್‌ಎಸಿ ಮತ್ತು ಐಬಿಯಿಂದ 50 ಕಿ.ಮೀ. ವ್ಯಾಪ್ತಿಯನ್ನು 'ಸೂಕ್ಷ್ಮ ವಲಯ' ಎಂದು ಮಾರ್ಗಸೂಚಿಯಲ್ಲಿ ಗುರುತಿಸಲಾಗಿದ್ದು, 'ಯೋಜನೆಗಳ ಅನುಷ್ಠಾನಕ್ಕೆ ಗೃಹ ಇಲಾಖೆಯಿಂದ ಭದ್ರತಾ ಅನುಮೋದನೆ ಪಡೆಯಬೇಕು ಹಾಗೂ ಅಂತರರಾಷ್ಟ್ರೀಯ ಗಡಿಯಿಂದ 20 ಕಿ.ಮೀ. ವ್ಯಾಪ್ತಿಯಲ್ಲಿ ರಕ್ಷಣಾ ಇಲಾಖೆಯಿಂದ ಪ್ರತ್ಯೇಕವಾಗಿ ನಿರಾಕ್ಷೇಪಣಾ ಪತ್ರ ಪಡೆಯಬೇಕು' ಎಂದು ಹೇಳಲಾಗಿದೆ.
'ಅರ್ಜಿದಾರರು ಕೇಂದ್ರ ಸರ್ಕಾರದ ಪೂರ್ವಾನುಮತಿ ಇಲ್ಲದೇ ಜಮೀನನ್ನು ವಿದೇಶಿ ಕಂಪನಿಗಳಿಗೆ ಪರಭಾರೆ ಮಾಡುವಂತಿಲ್ಲ. ಈಗಾಗಲೇ ರಾಷ್ಟ್ರೀಯ ಭದ್ರತಾ ಅನುಮೋದನೆ, ಎನ್‌ಒಸಿ ಪಡೆದ ಯೋಜನೆಗಳು, ಹೊಸ ಮಾರ್ಗಸೂಚಿ ಅನ್ವಯ ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ' ಎಂದು ಹೇಳಿದೆ.

