ಕರಾಚಿ: ಪಾಕಿಸ್ತಾನದ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ಸಂದರ್ಭ ಕರಾಚಿ ನಗರದಾದ್ಯಂತ 'ಗಾಳಿಯಲ್ಲಿ ನಡೆಸಿದ ಗುಂಡು ಹಾರಾಟ'ದಿಂದ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, 94 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಈ ದುರಂತ ಸಂಭವಿಸಿದೆ. ಧ್ವಜಗಳು, ಪಟಾಕಿಗಳು ಮತ್ತು ಬೈಕ್ ಸವಾರಿಗಳೊಂದಿಗೆ ಜನರು ರಸ್ತೆಗಿಳಿದು ಸಂಭ್ರಮಿಸುತ್ತಿದ್ದರು. ಆದರೆ, ಗಾಳಿಯಲ್ಲಿ ಹಾರಿಸಿದ ಗುಂಡುಗಳಿಂದಾಗಿ ಒಂದು ಮಗು ಹಾಗೂ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಕನಿಷ್ಠ 94 ಜನರು ಗಾಯಗೊಂಡಿದ್ದಾರೆ. ಕೆಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಗುಂಡಿನ ದಾಳಿಯ ವರದಿಗಳು ಹರಡುತ್ತಿದ್ದಂತೆ ಕರಾಚಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ.
ವಿವಿಧ ಪ್ರದೇಶಗಳಿಂದ 10 ಶಂಕಿತರನ್ನು ಬಂಧಿಸಲಾಗಿದ್ದು, ಬಂಧಿತರಿಂದ ಗಾಳಿಯಲ್ಲಿ ಗುಂಡು ಹಾರಿಸಲು ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

