ನವದೆಹಲಿ(PTI): ಯುಜಿಸಿ-ಎನ್‌ಇಟಿಯ ಮೂರು ವಿಷಯಗಳ ಮರುಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ಭಾನುವಾರ ಘೋಷಿಸಿದೆ.
ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜವಿಜ್ಞಾನ ಮರುಪರೀಕ್ಷೆ ನಡೆಸಲಾಗುವುದು. ಈ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಹಲವು ದೋಷಗಳು ಇರುವ ಬಗ್ಗೆ ವ್ಯಾಪಕ ದೂರುಗಳು ಬಂದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ಸೆಪ್ಟೆಂಬರ್ 9ರಂದು ಇಂಗ್ಲಿಷ್(ಬೆಳಿಗ್ಗೆ 9ರಿಂದ ಮಧ್ಯಾಹ್ನ 12ರವರೆಗೆ) ಹಾಗೂ ವಾಣಿಜ್ಯ(ಮಧ್ಯಾಹ್ನ 3ರಿಂದ 6ರ ವರೆಗೆ) ವಿಷಯಗಳ ಮರುಪರೀಕ್ಷೆ ನಡೆಸಲಾಗುವುದು. ಸಮಾಜವಿಜ್ಞಾನ ವಿಷಯದ ಮರುಪರೀಕ್ಷೆ ಸೆಪ್ಟೆಂಬರ್ 10ರಂದು ಬೆಳಿಗ್ಗೆ 9ರಿಂದ 12ರ ವರೆಗೆ ನಡೆಯಲಿದೆ ಎಂದು ಎನ್‌ಟಿಎ ತಿಳಿಸಿದೆ.
ಪ್ರಸಕ್ತ ಸಾಲಿನ ಯುಜಿಸಿ-ಎನ್‌ಇಟಿ ಪರೀಕ್ಷೆ ಜೂನ್ 22ರಿಂದ 30ರ ವರೆಗೆ ನಡೆದಿತ್ತು.

