ಅಲಪ್ಪುಳ: ಬಿಜೆಪಿಯನ್ನು ಓಲೈಸುವಂತಹ ಹೇಳಿಕೆಗಳನ್ನು ನೀಡುವುದರಿಂದ ಕಾಂಗ್ರೆಸ್ ನಾಯಕರು ದೂರವಿರಬೇಕು ಎಂದು ಂIಅಅ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಸೂಚಿಸಿದ್ದಾರೆ.
ವಿದ್ಯಾರ್ಥಿಗಳನ್ನು ಸಂಪರ್ಕಿಸುವ ರಾಹುಲ್ ಗಾಂಧಿ ಅವರ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮದ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ನೀಡಿರುವ ಹೇಳಿಕೆಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಪ್ರತಿಕ್ರಿಯೆ ನೀಡಿದರು.
ಕಾಕ್ರೋಚ್ ಜನತಾ ಪಾರ್ಟಿ Gen Z ಯುವಕರ ನಡುವೆ ಸೃಷ್ಟಿಸಿದ ಸಂಚಲನದಷ್ಟು ರಾಹುಲ್ ಗಾಂಧಿ ಅವರ 'ಛಾತ್ರೋಂ ಕಿ ಗೂಂಜ್' ಕಾರ್ಯಕ್ರಮ ಸೃಷ್ಟಿಸಿಲ್ಲ' ಎಂದು ಶಶಿ ತರೂರ್ ಹೇಳಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಅಲಪ್ಪುಳ ಸಂಸದರೂ ಆಗಿರುವ ವೇಣುಗೋಪಾಲ್, "ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವ ಅವರ ಹೇಳಿಕೆಯನ್ನು ಮಾತ್ರ ನಾನು ನೋಡಿದ್ದೇನೆ. ಆದರೆ, ಅವರು ನಿಖರವಾಗಿ ಏನು ಹೇಳಿದರು ಎಂಬುದು ನನಗೆ ಸ್ಪಷ್ಟವಾಗಿ ಕೇಳಿಸಲಿಲ್ಲ" ಎಂದರು.
ಶಶಿ ತರೂರ್ ಅವರ ಹೇಳಿಕೆಯ ಕುರಿತು ಅವರನ್ನೇ ನೇರವಾಗಿ ಪ್ರಶ್ನಿಸಬೇಕು ಎಂದು ಹೇಳಿದ ವೇಣುಗೋಪಾಲ್, ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ಕಾಂಗ್ರೆಸ್ ನಾಯಕರು ಜಾಗರೂಕರಾಗಿರಬೇಕು ಎಂದು ತಾಕೀತು ಮಾಡಿದರು.
"ಕಾಂಗ್ರೆಸ್ ಸದಸ್ಯರು ಯಾವಾಗಲೂ ಪಕ್ಷದ ಚೌಕಟ್ಟು ಅಥವಾ ಶಿಸ್ತಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರದಿದ್ದರೂ, ಕೇವಲ ಬಿಜೆಪಿಯನ್ನು ಓಲೈಸುವಂತಹ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಲು ನಾವು ಜಾಗರೂಕರಾಗಿರಬೇಕು" ಎಂದು ಅವರು ಹೇಳಿದರು.
"ಯಾರಾದರೂ ರಾಹುಲ್ ಗಾಂಧಿಯಲ್ಲಿ ತಪ್ಪು ಹುಡುಕಿದರೆ ಅಥವಾ ಅವರ ಬಗ್ಗೆ ಒಂದೆರಡು ನಕಾರಾತ್ಮಕ ವಿಷಯಗಳನ್ನು ಹೇಳಿದರೆ, ಬಿಜೆಪಿ ರೋಮಾಂಚನಗೊಳ್ಳುತ್ತದೆ. ಅದು ಅವರ ಪಾಲಿಗೆ ಅತ್ಯಂತ ಸಂತೋಷದಾಯಕ ಸಂಗತಿಯಾಗಿದೆ" ಎಂದು ಅವರು ವ್ಯಂಗ್ಯವಾಡಿದರು.
ಶಶಿ ತರೂರ್ ಅವರು ಇಂತಹ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ನೀಡಿದ್ದಾರೆ ಎಂದು ತಮಗೆ ಅನಿಸುವುದಿಲ್ಲ ಎಂದೂ ವೇಣುಗೋಪಾಲ್ ಹೇಳಿದರು.
"ತಿಳಿದೊ, ತಿಳಿಯದೆಯೊ ಇಂತಹ ಹೇಳಿಕೆಗಳನ್ನು ನೀಡುವುದರ ಬಗ್ಗೆ ನಾವೆಲ್ಲ ಜಾಗರೂಕರಾಗಿರಬೇಕು. ಅವರು ಇದನ್ನು ತಿಳಿದೇ ಹೇಳಿದ್ದಾರೆಂದಾಗಲಿ ಅಥವಾ ಉದ್ದೇಶಪೂರ್ವಕವಾಗಿ ಹೇಳಿದ್ದಾರೆಂದಾಗಲಿ ನನಗನ್ನಿಸುವುದಿಲ್ಲ. ಆದರೆ, ನಾವು ಇಂತಹ ಹೇಳಿಕೆಗಳಿಂದ ದೂರ ಉಳಿಯಬೇಕು" ಎಂದು ಅವರು ಸೂಚ್ಯವಾಗಿ ತಿಳಿಸಿದರು.

