ನವದೆಹಲಿ: 'ವಿಕಸಿತ ಭಾರತ'ದ ಗುರಿ ತಲುಪಲು ದೇಶದ ಯುವಜನರು ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಿರಬೇಕು. ಇದಕ್ಕಾಗಿ ಅವರು ಎಲ್ಲ ರೀತಿಯ ಮಾದಕ ವಸ್ತುಗಳ ಸೇವನೆಯಿಂದ ದೂರವಿರುವುದು ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದ್ದಾರೆ.
ಯುವಜನತೆಯಲ್ಲಿ ಮಾದಕ ವಸ್ತುಗಳ ವ್ಯಸನ ನಿರ್ಮೂಲನೆ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 'ವಿಕಸಿತ ಭಾರತ ಸಂಕಲ್ಪ ಅಭಿಯಾನಕ್ಕಾಗಿ ನಶಾ ಮುಕ್ತ ಯುವ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ, 'ಈ ಅಭಿಯಾನವು ಕೇವಲ ಯುವಜನರಿಗಷ್ಟೇ ಅಲ್ಲ, ಅವರ ಕುಟುಂಬ, ಸಮಾಜ ಹಾಗೂ ಇಡೀ ದೇಶಕ್ಕೆ ಸಂಬಂಧಿಸಿದ್ದಾಗಿದೆ' ಎಂದು ಹೇಳಿದ್ದಾರೆ.
ಜೆನ್-ಝಿ ಪ್ರತಿನಿಧಿಸುವ ಯುವಜನರ ಸಮ್ಮುಖದಲ್ಲಿ ವರ್ಚುವಲ್ ಆಗಿ ಪ್ರಧಾನಿ ಮೋದಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಇದರೊಂದಿಗೆ 100 ವಾರಗಳ ಸುದೀರ್ಘ 'ಜನ ಭಾಗಿದಾರಿ' ಅಭಿಯಾನಕ್ಕೆ ಚಾಲನೆ ದೊರಕಿದ್ದು, ಪ್ರತಿ ಭಾನುವಾರ ದೇಶದಾದ್ಯಂತ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಯುವಜನರು ಮಾದಕ ದ್ರವ್ಯ ವ್ಯಸನಿಯಾಗದಂತೆ ತಡೆಯುವುದು ಮತ್ತು ಸಾಮಾಜಿಕ ಬದಲಾವಣೆಯ ರಾಯಭಾರಿಗಳಾಗುವಂತೆ ಪ್ರೇರೇಪಿಸುವುದು ಈ ಅಭಿಯಾನದ ಉದ್ದೇಶವಾಗಿದೆ. ಈ ಅಭಿಯಾನದ ಭಾಗವಾಗಿ ಕ್ರೀಡಾಕೂಟಗಳು, ವಾಕಥಾನ್, ಧ್ಯಾನ ಶಿಬಿರ, ಸಾಂಸ್ಕೃತಿಕ ಕಾರ್ಯಕ್ರಮಗಳು, ಬೀದಿ ನಾಟಕಗಳು, ಸಂವಾದ ಗೋಷ್ಠಿಗಳು, ಕಲಾ ಸ್ಪರ್ಧೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದಂತೆ ಇತ್ತಿಚೀಗಷ್ಟೇ ದೆಹಲಿಯ ಜಂತರ್ ಮಂತರ್ನಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

