ನವದೆಹಲಿ(PTI): 11 ಹಾಗೂ 12ನೇ ತರಗತಿಯ ರಾಜಕೀಯ ವಿಜ್ಞಾನ ಪಠ್ಯಪುಸ್ತಕಗಳ ಮರುಪರಿಶೀಲನೆಗೆ ಮುಂದಾಗಿರುವ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ), ಪಠ್ಯಪುಸ್ತಕ ರಚನೆ ತಂಡವನ್ನು ಪುನರ್‌ರಚಿಸಿದೆ. ತಂಡದ ಸದಸ್ಯರ ಪೈಕಿ ಕನಿಷ್ಠ ನಾಲ್ವರಿಗೆ ನೇರವಾಗಿ ಇಲ್ಲವೇ ಪರೋಕ್ಷವಾಗಿ ಆರ್‌ಎಸ್‌ಎಸ್ ಜೊತೆ ನಂಟು ಇರುವುದು ಚರ್ಚೆಗೆ ಗ್ರಾಸವಾಗಿದೆ.
ದೇಶದ ಸಾಂಸ್ಕೃತಿಕ ಶ್ರೀಮಂತಿಕೆ, ಭಾರತೀಯ ಜ್ಞಾನ ವ್ಯವಸ್ಥೆಗಳ ಕುರಿತ ಅಂಶಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಉದ್ದೇಶದಿಂದ ಈ ತಂಡವನ್ನು ಪುನರ್ ರಚಿಸಲಾಗಿದೆ. ತಂಡದ ನೇತೃತ್ವವನ್ನು ಶಿಕ್ಷಣ ತಜ್ಞ ಹಾಗೂ ರಾಜಕೀಯ ವಿಶ್ಲೇಷಕ ಸಂದೀಪ್ ಶಾಸ್ತ್ರಿ ವಹಿಸಲಿದ್ದಾರೆ.
ಸಂದೀಪ್ ಶಾಸ್ತ್ರಿಯವರು ಬೆಂಗಳೂರಿನಲ್ಲಿರುವ ನಿಟ್ಟೆ ಶಿಕ್ಷಣ ಪ್ರತಿಷ್ಠಾನದ ಉಪಾಧ್ಯಕ್ಷ.
ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಂ.ಎನ್.ಸುರೇಶ್ ಕುಮಾರ್ ಕೂಡ ತಂಡದ ಸದಸ್ಯರಲ್ಲೊಬ್ಬರು. ಬರುವ ನವೆಂಬರ್ ಒಳಗಾಗಿ 11ನೇ ತರಗತಿ ಪಠ್ಯಪುಸ್ತಕ ಸಿದ್ಧಪಡಿಸಬೇಕು ಹಾಗೂ ಮುಂದಿನ ಜುಲೈ ವೇಳೆಗೆ 12ನೇ ತರಗತಿ ಪಠ್ಯಪುಸ್ತಕ ಸಿದ್ಧಪಡಿಸುವಂತೆ ತಂಡಕ್ಕೆ ಸೂಚಿಸಲಾಗಿದೆ.
ಆರ್‌ಎಸ್‌ಎಸ್ ನಂಟು: ಸದ್ಯ, ಶಿಕ್ಷಣ ಸಚಿವಾಲಯದಲ್ಲಿ ಹಿರಿಯ ಕನ್ಸಲ್ಟಂಟ್ ಆಗಿರುವ ಯದುನಾಥ ದೇಶಪಾಂಡೆ ತಂಡದ ಸದಸ್ಯರಲ್ಲೊಬ್ಬರು. ಇವರು ಆರ್‌ಎಸ್‌ಎಸ್‌ನ ವಿದ್ಯಾರ್ಥಿ ಘಟಕವಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ(ಎಬಿವಿಪಿ) ಸಕ್ರಿಯ ಕಾರ್ಯಕರ್ತರಾಗಿದ್ದರು. ಎಬಿವಿಪಿಯ ಮಹಾರಾಷ್ಟ್ರ ಘಟಕದ ರಾಜ್ಯ ಜಂಟಿ ಸಂಘಟನಾ ಕಾರ್ಯದರ್ಶಿ ಹಾಗೂ ಮುಂಬೈ-ಕೊಂಕಣ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿದ್ದರು ಎಂಬುದು ಅವರ ಲಿಂಕ್ಡ್ ಇನ್ ಖಾತೆಯಿಂದ ತಿಳಿದು ಬರುತ್ತದೆ.
ಅವರು ಬಿಜೆಪಿಯ ರಾಜಕೀಯ ಕನ್ಸಲ್ಟಂಟ್ ಎಂಬ ಮಾಹಿತಿಯೂ ಈ ಖಾತೆಯಲ್ಲಿದೆ.
ಮತ್ತೊಬ್ಬ ಸದಸ್ಯ ಪ್ರಶಾಂತ ದಿವೇಕರ್ ಅವರು ಪುಣೆ ಮೂಲದ ಜ್ಞಾನ ಪ್ರಬೋಧಿನಿ ಸಂಘಟನೆ ಜೊತೆ ದೀರ್ಘ ನಂಟು ಹೊಂದಿದ್ದವರು. ಆರ್‌ಎಸ್‌ಎಸ್‌ನ ಅಂಗಸಂಸ್ಥೆಯಾದ ಜ್ಞಾನ ಪ್ರಬೋಧಿನಿಯನ್ನು ಸಂಘದ ಪ್ರಚಾರಕ ವಿನಾಯಕ ವಿಶ್ವನಾಥ ಅವರು 1962ರಲ್ಲಿ ಸ್ಥಾಪಿಸಿದ್ದಾರೆ.
ಜೆಎನ್‌ಯುನ ಸೆಂಟರ್ ಫಾರ್ ಪೊಲಿಟಿಕಲ್ ಸ್ಟಡೀಸ್‌ನ ಪ್ರಾಧ್ಯಾಪಕಿ ವಂದನಾ ಮಿಶ್ರಾ ಅವರೂ ತಂಡದ ಸದಸ್ಯೆ. ಅವರು ಎಬಿವಿಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು.
ಜೆಎನ್‌ಯುನ ಸೆಂಟರ್ ಫಾರ್ ಕಂಪ್ಯಾರೇಟಿವ್ ಪೊಲಿಟಿಕ್ಸ್ ಅಂಡ್ ಪೊಲಿಟಿಕಲ್ ಥಿಯರಿಯ ಸಹಪ್ರಾಧ್ಯಾಪಕರಾಗಿರುವ ರವಿ ರಮೇಶ್ಚಂದ್ರ ಶುಕ್ಲಾ ಅವರಿಗೂ ಆರ್‌ಎಸ್‌ಎಸ್ ಜೊತೆ ನಂಟಿದೆ.
ಸಂಘದ ಅಂಗಸಂಸ್ಥೆಯಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಡೆಮಾಕ್ರಟಿಕ್ ಲೀಡರ್‌ಶಿಪ್-ರಾಮಭಾವು ಮ್ಹಾಲ್ಗಿ ಪ್ರಬೋಧಿನಿ ಪ್ರಕಟಿಸುವ ಜರ್ನಲ್ ಆಫ್ ಡೆಮಾಕ್ರಟಿಕ್ ಗವರ್ನನ್ಸ್‌ನ ಸಂಪಾದಕೀಯ ಮಂಡಳಿಯ ಸದಸ್ಯರಾಗಿ ಶುಕ್ಲಾ ಕಾರ್ಯ ನಿರ್ವಹಿಸಿದ್ದರು.
ದೇಶದ ವಿವಿಧ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಸ್ಥೆಗಳ ಬೋಧಕರು/ಸಂಶೋಧಕರು ತಂಡದ ಸದಸ್ಯರಾಗಿದ್ದಾರೆ.
ಪಠ್ಯಪುಸ್ತಕ ರಚನಾ ತಂಡವು ಸಮಾಜವಿಜ್ಞಾನ, ಭಾಷೆಗಳು, ಭಾರತದ ಜ್ಞಾನ ವ್ಯವಸ್ಥೆಗಳು, ಪರಿಸರ ಶಿಕ್ಷಣ, ಬೋಧನೆ-ಕಲಿಕಾ ಸಾಮಗ್ರಿಗಳ ಕ್ಷೇತ್ರಕ್ಕೆ ಸಂಬಂಧಿಸಿದ ಗುಂಪುಗಳ ಮಾರ್ಗದರ್ಶನ ಪಡೆಯಲಿದೆ ಎಂದು ಎನ್‌ಸಿಇಆರ್‌ಟಿ ಈ ಕುರಿತು ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ. 'ಪಠ್ಯಪುಸ್ತಕಗಳ ಪರಿಷ್ಕರಣೆಯು ಭಾರತೀಯ ಜ್ಞಾನ ವ್ಯವಸ್ಥೆಗಳು, ಶಿಕ್ಷಣ ತಂತ್ರಜ್ಞಾನ, ಮೌಲ್ಯಮಾಪನ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಏಕೀಕರಣ ಅಗತ್ಯ. ಇಂತಹ ಏಕೀಕರಣ ಸಾಧಿಸುವುದಕ್ಕಾಗಿಯೇ ಪಠ್ಯಪುಸ್ತಕಗಳ ಪರಿಶೀಲನೆ ನಡೆಸಲಾಗುತ್ತಿದೆ' ಎಂದು ಎನ್‌ಸಿಇಆರ್‌ಟಿ ನಿರ್ದೇಶಕ ದಿನೇಶಪ್ರಸಾದ್ ಸಕ್ಲಾನಿ ಈ ಅಧಿಸೂಚನೆಯಲ್ಲಿ ಹೇಳಿದ್ದಾರೆ.

