ಛತ್ರಪತಿ ಸಂಭಾಜಿನಗರ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಪ್ರತಿಭಟನೆ ನಡೆಸಿದ ಜೆನ್-ಝೀ ಯುವಕರನ್ನು ದೇಶವಿರೋಧಿಗಳು ಎನ್ನಬಾರದು ಎಂದು ಹೇಳಿರುವುದನ್ನು ಉಲ್ಲೇಖಿಸಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ, ಬಿಜೆಪಿಗೆ ತಿವಿದಿದ್ದಾರೆ.
ಬಿಜೆಪಿಯು ತನ್ನ 'ಗಾಡ್ಫಾದರ್' ಮಾತನ್ನಾದರೂ ಕೇಳಲಿ ಎಂದಿರುವ ಅವರು, ಕೇಂದ್ರದ ಆಡಳಿತ ಪಕ್ಷ ಹಾಗೂ ಅದರ ಸೈದ್ಧಾಂತಿಕ ಮಾರ್ಗದರ್ಶಕರ ನಡುವೆ ಹೊಂದಾಣಿಕೆ ಇಲ್ಲ ಎಂದು ಟೀಕಿಸಿದ್ದಾರೆ.
ನೀಟ್ ಪರೀಕ್ಷಾ ಅಕ್ರಮವನ್ನು ಖಂಡಿಸಿ, ಕೇಂದ್ರ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ, ಸಿಜೆಪಿ ಜುಲೈ 20ರಂದು 'ಸಂಸತ್ ಚಲೋ' ಪ್ರತಿಭಟನಾ ಮೆರವಣಿಗೆಗೆ ಕರೆ ನೀಡಿತ್ತು. ವಿದ್ಯಾರ್ಥಿಗಳು ಸೇರಿದಂತೆ ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಲಾಠಿಚಾರ್ಜ್, ಅಶ್ರುವಾಯು ಸಿಡಿಸಿದ್ದರು. ಈ ವೇಳೆ ಉಂಟಾದ ಘರ್ಷಣೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಗಾಯಗೊಂಡಿದ್ದರು.
ಕೇಂದ್ರ ಹಾಗೂ ದೆಹಲಿ ಸರ್ಕಾರವು ಪ್ರತಿಭಟನೆಯನ್ನು ನಿಭಾಯಿಸಿದ ರೀತಿಯ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಸಾಮಾಜಿಕ ಮಾಧ್ಯಮಗಳಲ್ಲಿಯೂ ಟೀಕಾಪ್ರಹಾರವಾಗಿತ್ತು.
ಪ್ರತಿಭಟನೆ ಮಾಡಿದಾಕ್ಷಣ 'ಜೆನ್ ಝೀ'ಗಳು ದೇಶ ವಿರೋಧಿಗಳಾಗಲ್ಲ: ಮೋಹನ್ ಭಾಗವತ್
ಪ್ರತಿಭಟನೆಯ ಕುರಿತು ಗುರುವಾರ ಮಾತನಾಡಿದ್ದ ಭಾಗವತ್, ಸರ್ಕಾರದ ವಿರುದ್ಧ ಜೆನ್-ಝೀಗಳು ಪ್ರಾಮಾಣಿಕ ಹೋರಾಟ ನಡೆಸಿದ್ದಾರೆ. ಅವರನ್ನು ದೇಶವಿರೋಧಿಗಳು ಎನ್ನಬಾರದು ಎಂದಿದ್ದರು.
ಅವರ ಮಾತನ್ನು ಉಲ್ಲೇಖಿಸಿರುವ ದೀಪ್ಕೆ, 'ಪ್ರತಿಭಟನೆ ನಡೆಸಿದ ಯುವಕರನ್ನು ದೇಶವಿರೋಧಿಗಳು ಎಂದು ಕರೆಯಬಾರದು. ಅವರ ಸಮಸ್ಯೆಗಳು ನೈಜವಾಗಿವೆ ಎಂಬುದಾಗಿ ಭಾಗವತ್ ಅವರು ಅತ್ಯಂತ ನಿರ್ಣಾಯಕ ಹೇಳಿಕೆ ನೀಡಿದ್ದಾರೆ. ಬಿಜೆಪಿ ಅಧ್ಯಕ್ಷರು ನಮ್ಮನ್ನು ವೈರಸ್ ಎಂದು ಕರೆದಿದ್ದರು. ಧರ್ಮೇಂದ್ರ ಪ್ರಧಾನ್ ಅವರು ನಮ್ಮನ್ನು ಭಯೋತ್ಪಾದಕರ ಬಿ ತಂಡ ಎಂದಿದ್ಡರು. ಇದೀಗ ಅವರೆಲ್ಲ ಮೋಹನ್ ಭಾಗವತ್ ಅವರ ಮಾತನ್ನು ಕೇಳಬೇಕು. ಏಕೆಂದರೆ, ಭಾಗವತ್ ಅವರು ಬಿಜೆಪಿಯ ಮಾರ್ಗದರ್ಶಕ ಹಾಗೂ ಗಾಡ್ಫಾದರ್' ಎಂದು ಹೇಳಿದ್ದಾರೆ.
ಆರ್ಎಸ್ಎಸ್ ಮುಖ್ಯಸ್ಥರ ಮಾತನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ಎಚ್ಚರಿಸಿರುವ ದೀಪ್ಕೆ, ಬಿಜೆಪಿಯ ನಿಲುವು ಮತ್ತು ಭಾಗವತ್ ಅವರ ಅಭಿಪ್ರಾಯಗಳು ಒಂದಿಷ್ಟೂ ತಾಳೆಯಾಗುತ್ತಿಲ್ಲ ಎಂದಿದ್ದಾರೆ.

