ನವದೆಹಲಿ: ನೀಟ್ (ಯುಜಿ) ಪರೀಕ್ಷೆಯನ್ನು ಆನ್‌ಲೈನ್ ಮಾದರಿಯಲ್ಲಿ ನಡೆಸಲು ಉದ್ದೇಶಿಸಿರುವ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ಸಲ್ಲಿಸುವಂತೆ ವೈದ್ಯರ ಸಂಘವೊಂದು ಸೇರಿದಂತೆ ಸಂಬಂಧಿತ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ.
ನೀಟ್ ಪರೀಕ್ಷೆಯನ್ನು ಭೌತಿಕ (ಪೆನ್ ಮತ್ತು ಪೇಪರ್) ವಿಧಾನದ ಬದಲು ಜೆಇಇ ಮಾದರಿಯಲ್ಲಿ ಆನ್‌ಲೈನ್ ಮೂಲಕ ನಡೆಸುವ ವಿಷಯವು ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ತಿಳಿಸಿತ್ತು.
ಈ ವಿಷಯವನ್ನು ಆಗಸ್ಟ್ 19ರಂದು ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠ, ಕೇಂದ್ರವು ಸಲ್ಲಿಸಿರುವ ಪ್ರಮಾಣಪತ್ರಕ್ಕೆ ಅರ್ಜಿದಾರರು ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಬಹುದು ಎಂದು ಹೇಳಿತು.
ಅಖಿಲ ಭಾರತ ವೈದ್ಯಕೀಯ ಸಂಘಗಳ ಮಹಾ ಒಕ್ಕೂಟ (ಎಫ್‌ಎಐಎಂಎ) ಪರವಾಗಿ ಹಾಜರಾದ ವಕೀಲೆ ತನ್ವಿ ದುಬೆ ಅವರು, 'ಪರೀಕ್ಷಾ ವಿಧಾನವನ್ನು ಆನ್‌ಲೈನ್ ಮಾದರಿಗೆ ಬದಲಾಯಿಸುವ ಯಾವುದೇ ಯೋಜನೆ ಇದ್ದರೆ, ಅದನ್ನು ಆದಷ್ಟು ಬೇಗ ಕೈಗೊಳ್ಳಬೇಕು. ಏಕೆಂದರೆ, ಪ್ರಸ್ತುತ ವಿದ್ಯಾರ್ಥಿಗಳು ಪೆನ್ ಮತ್ತು ಪೇಪರ್ ವಿಧಾನದ ಆಧಾರದ ಮೇಲೆ ತಮ್ಮ ಪರೀಕ್ಷಾ ಸಿದ್ಧತೆ ನಡೆಸುತ್ತಿದ್ದಾರೆ' ಎಂದು ಹೇಳಿದರು.
ಎಲ್ಲಾ ಅಂಶಗಳನ್ನು ಪರಿಗಣಿಸುವುದಾಗಿ ತಿಳಿಸಿದ ಪೀಠ, ಸಂಬಂಧಪಟ್ಟ ಭಾಗೀದಾರರು ತಮ್ಮ ಪ್ರತಿಕ್ರಿಯೆಗಳು ಮತ್ತು ಸಲಹೆಗಳನ್ನು ನೀಡುವಂತೆ ಸೂಚಿಸಿತು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯಲ್ಲಿ (ಎನ್‌ಟಿಎ) ಸುಧಾರಣೆ ಕೋರಿ ಅರ್ಜಿ ಸಲ್ಲಿಸಿರುವ ಆರ್‌ಜೆಡಿ ಸಂಸದ ಸುಧಾಕರ್ ಸಿಂಗ್ ಪರವಾಗಿ ಹಿರಿಯ ವಕೀಲರಾದ ಪೀಯೂಷ್ ಕಾಂತಿ ರಾಯ್ ಮತ್ತು ಸತ್ಯಮ್ ಸಿಂಗ್ ರಜಪೂತ್ ಹಾಜರಾದರು.

