ಕಾಸರಗೋಡು: ಚಿತ್ರಕಲೆಯೊಂದಿಗೆ ಸಾಹಿತ್ಯದ ಕೃಷಿ ನಡೆಸುವ ಮೂಲಕ ಪಿ.ಆರ್ ತಿಪ್ಪೇಸ್ವಾಮಿ ಅವರು ನಾಡಿನ ಶ್ರೇಷ್ಠ ಕಲಾವಿದರಾಗಿ ಖ್ಯಾತಿ ಗಳಿಸಿರುವುದಾಗಿ ಖ್ಯಾತ ಚಿತ್ರ ಕಲಾವಿದ ಪಿ.ಎಸ್ ಪುಣಿಂಚಿತ್ತಾಯ ತಿಳಿಸಿದ್ದಾರೆ.
ಅವರು ಕಾಸರಗೋಡು ತಾಳಿಪಡ್ಪು ಉಡುಪಿ ಗಾರ್ಡನ್ಸ್‍ನಲ್ಲಿ ಪಿ ಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನ (ರಿ.), ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಸಾಹಿತ್ಯಕ-ಸಾಂಸ್ಕೃತಿಕ-ಸಾಮಾಜಿಕ ಸಂಸ್ಥೆ ರಂಗ ಚಿನ್ನಾರಿ ಕಾಸರಗೋಡು ಇವುಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಡೆದ 'ಪಿ.ಆರ್.ತಿಪ್ಪೇಸ್ವಾಮಿ ಕಲಾಪ್ರಶಸ್ತಿ ಪ್ರದಾನ-2026'ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ವಪ್ರತಿಷ್ಠೆ, ಅಹಂಬಾವ ಬಿಟ್ಟು ಅಧ್ಯಯನ ನಡೆಸಿದರೆ ಉತ್ತಮ ಕಲಾವಿದನಾಗಿ ಬೆಳೆಯಲು ಸಾಧ್ಯ. ಈ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡಿದ್ದ ಪಿ.ಆರ್ ತಿಪ್ಪೇಸ್ವಾಮಿ ಅವರು ತಾವು ಬೆಳೆಯುವುದರ ಜತೆಗೆ ಹಲವಾರು ಮಂದಿ ಶಿಷ್ಯವರ್ಗವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಪಿ.ಆರ್ ತಿಪ್ಪೇಸ್ವಾಮಿ ಪ್ರತಿಷ್ಠಾನ ಅಧ್ಯಕ್ಷ ಡಾ. ರಾಜಶೇಖರ ಕದಂಬ ಅಧ್ಯಕ್ಷತೆ ವಹಿಸಿದ್ದರು. ರಂಗಚಿನ್ನಾರಿ ನಿರ್ದೇಶಕ, ಚಿತ್ರನಟ ಕಾಸರಗೋಡು ಚಿನ್ನಾ ಅವರು ಪಿಆರ್‍ಟಿ ಭಾವಶಿಲ್ಪಕ್ಕೆ ಹಾರಾರ್ಪಣೆ ನಡೆಸಿ, ಪುಷ್ಪಾರ್ಚನೆ ಸಲ್ಲಿಸಿದರು.
ಈ ಸಂದರ್ಭ ಹಿರಿಯ ಚಿತ್ರ ಕಲಾವಿದ, ವಿಜಯಪುರ ನಗರದ ಮಲ್ಲಪ್ಪ ಸಿದ್ದಪ್ಪ ಹಳ್ಳಿ ಅವರಿಗೆ ಅವರಿಗೆ ಪಿಆರ್‍ಟಿ ಕಲಾ ಪ್ರಶಸ್ತಿ ಹಾಗೂ ಹಿರಿಯ ಕೋಲಾಟ ಕಲಾವಿದ, ಜಾನಪದ ಹಾಡುಗಾರ ಚಿತ್ರದುರ್ಗದ ನರಸಪ್ಪ ಅವರಿಗೆ ಜಾನಪದ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರಿನ ಮಹಾಲಸಾ ಚಿತ್ರಕಲಾ ಶಾಲೆ ಪ್ರಾಚಾರ್ಯ ಬಿ.ಪಿ ಮೋಹನ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಂಕರ್ ಹರ್ತಿಕೋಟೆ, ನಿಸರ್ಗ ಗೋವಿಂದರಾಜ್, ಚಂದ್ರಶೇಖರಯ್ಯ ಎಚ್.ಆರ್, ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಡಾ.ಕೆ.ಕೆ ಶ್ಯಾನುಭಾಗ್, ಸವಿತಾ ಐ. ಭಟ್, ಪ್ರೊ. ಪಿ.ಎನ್ ಮೂಡಿತ್ತಾಯ, ಅರಿವಳಿಕೆ ತಜ್ಞ ಮೇಜರ್ ಡಾ. ಸಂತೋಷ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ಪಿಆರ್‍ಟಿ ಪ್ರತಿಷ್ಠಾನ ಕಾರ್ಯದರ್ಶಿ ಮಹಾದೇವ ಶೆಟ್ಟಿ ಜೆ.ಸಿ ಕಾರ್ಯಕ್ರಮ ನಿರೂಪಿಸಿದರು. ಸಹ ಕಾರ್ಯದರ್ಶಿ ಚಿಕ್ಕಣ್ಣ ಸಿ. ವಂದಿಸಿದರು.



