ಕಾಸರಗೋಡು: ಪ್ಲಾಸ್ಟಿಕ್ ತ್ಯಾಜ್ಯಗಳ ಮಧ್ಯೆ ಲಭಿಸಿದ್ದ ಎರಡು ಪವನ್ ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದನ್ನು ವಾರಸುದಾರರಿಗೆ ಹಸ್ತಾಂತರಿಸುವ ಮೂಲಕ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರು ಮಾದರಿಯಾಗಿದ್ದಾರೆ.
ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿಯ 10 ಹಾಗೂ 11ನೇ ವಾರ್ಡುಗಳ ಹಸಿರು ಕ್ರಿಯಾ ಸೇನೆ ಕಾರ್ಯಕರ್ತರಾದ ಕಮಲ ಎನ್ ಹಾಗೂ ಮಮತಾ ಪ್ರಾಮಾಣಿಕತೆ ಮೆರೆದ ಕಾರ್ಯಕರ್ತರು.
ಪೆÇಯಿನಾಚಿ ಪರಂಬನ್ ನಿವಾಸಿ ಕೃಷ್ಣನ್ ಎಂಬವರ ಮನೆಯಿಂದ ಸಂಗ್ರಹಿಸಲಾದ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸುವ ಮಧ್ಯೆ, ಇವುಗಳ ಸಂದಿಯಲ್ಲಿ ಚಿನ್ನ ಹಾಗೂ ನಗದು ಪತ್ತೆಯಾಗಿದೆ. ತ್ಯಾಜ್ಯವನ್ನು ಬೇರ್ಪಡಿಸುತ್ತಿದ್ದ ಸಂದರ್ಭ ಪ್ಲಾಸ್ಟಿಕ್ ಜೀಲವೊಂದರಲ್ಲಿ ಸುತ್ತಿಡಲಾಗಿದ್ದ ಸ್ಥಿತಿಯಲ್ಲಿ ನಗ ಹಾಗೂ ನಗದು ಪತ್ತೆಯಾಗಿತ್ತು.
ಕೃಷ್ಣನ್ ಅವರ ಪತ್ನಿ ಜಾನಕಿ ಇತ್ತೀಚೆಗೆ ನಿಧನರಾಗಿದ್ದು, ಅವರು ಉಪಯೋಗಿಸುತ್ತಿದ್ದ ಜೀಲದಲ್ಲಿ ಬಾಚಣಿಗೆ ಸೇರಿದಂತೆ ಕೆಲವೊಂದು ವಸ್ತುಗಳನ್ನು ತುಂಬಿಡಲಾಗಿತ್ತು. ಅವುಗಳನ್ನು ಒಟ್ಟಾಗಿ ತ್ಯಾಜ್ಯದ ಚೀಲದಲ್ಲಿ ತುಂಬಿಡಲಾಗಿತ್ತು. ಸೋಮವಾರ ತ್ಯಾಜ್ಯ ಸಂಗ್ರಹಿಸಲು ಹಸಿರು ಕ್ರಿಯಾ ಸೇನೆ ಕಾರ್ಯಕರ್ತೆಯರಾದ ಕಮಲಾ ಹಾಗೂ ಮಮತಾ ಆಘಮಿಸಿ, ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಡಿಸುವ ಮಧ್ಯೆ ಹಣ ಹಾಗೂ ಚಿನ್ನ ಪತ್ತೆಯಾಗಿದ್ದು, ಸ್ಥಳದಲ್ಲೇ ಇವುಗಳನ್ನು ಕೃಷ್ಣನ್ ಅವರಿಗೆ ಹಸ್ತಾಂತರಿಸಿದ್ದಾರೆ.
ಕಾರ್ಯಕರ್ತೆಯರ ಪ್ರಾಮಾಣಿಕತೆಯ ಬಗ್ಗೆ ಕೃಷ್ಣನ್ ಕುಟುಂಬ ಅಭಿನಂದನೆ ಸಲ್ಲಿಸಿದೆ.



