ಮುಂಬೈ: ಬಾಂಬೆ ಹೈಕೋರ್ಟ್ ನಲ್ಲಿ ಕಾರ್ಯನಿರ್ವಹಿಸುವ ಅಸೋಸಿಯೇಷನ್ ಆಫ್ ಅಡ್ವೊಕೇಟ್ಸ್ ಆಫ್ ವೆಸ್ಟರ್ನ್ ಇಂಡಿಯಾ (AAWI) 162 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ವಕೀಲರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಲು ನಿರ್ಧರಿಸಿದೆ.
ಮುಂದಿನ ಚುನಾವಣೆಯಿಂದ ಅಧ್ಯಕ್ಷ ಸ್ಥಾನವನ್ನು ಮಹಿಳಾ ಸದಸ್ಯರಿಗೆ ಮೀಸಲಿಡಲು ಸಂಘದ ಸಂವಿಧಾನ ಮತ್ತು ನಿಯಮಗಳಿಗೆ ತಿದ್ದುಪಡಿ ತರಲು ಸರ್ವಾನುಮತದಿಂದ ನಿರ್ಧರಿಸಲಾಗಿದೆ.
1864ರಲ್ಲಿ ಸ್ಥಾಪನೆಯಾದ AAWIಯಲ್ಲಿ ಈವರೆಗೆ ಯಾವುದೇ ಮಹಿಳೆ ಅಧ್ಯಕ್ಷರಾಗಿಲ್ಲ.
ಈ ನಿರ್ಧಾರವನ್ನು ಹಿರಿಯ ವಕೀಲೆ ದೀಪಾ ಚವಾಣ್ ಸ್ವಾಗತಿಸಿದ್ದಾರೆ. 'AAWIಯ 162 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷರು ಬರಲಿದ್ದಾರೆ. ಇದು ಸಮಾನತೆಯತ್ತ ಮಹತ್ವದ ಹೆಜ್ಜೆ. ಸಂಘದ ಸದಸ್ಯರಲ್ಲಿ ಮಹಿಳೆಯರ ಪ್ರಮಾಣ ಕಡಿಮೆಯಿದ್ದರೂ, ನಾಯಕತ್ವದಲ್ಲಿ ಮಹಿಳೆಯರಿಗೆ ಅವಕಾಶ ಕಲ್ಪಿಸಿರುವುದು ಸಮಾನತೆಯತ್ತ ದೊಡ್ಡ ಹೆಜ್ಜೆಯಾಗಿದೆ. ಮಹಿಳಾ ವಕೀಲರಿಗೆ ಇದು ಖಂಡಿತವಾಗಿಯೂ ಮೈಲಿಗಲ್ಲು' ಎಂದು ಅವರು ಹೇಳಿದ್ದಾರೆ.
ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಯನ್ನು AAWI 2018ರಲ್ಲೇ ಆರಂಭಿಸಿತ್ತು ಎಂದೂ ಚವಾಣ್ ತಿಳಿಸಿದ್ದಾರೆ.
AAWI ಅಧ್ಯಕ್ಷ ಪ್ರಶಾಂತ್ ರೇಲೇಕರ್ ಹೊರಡಿಸಿರುವ ಅಧಿಕೃತ ಹೇಳಿಕೆಯ ಪ್ರಕಾರ, ಸಂಘದ ಕಾರ್ಯಕಾರಿ ಮಂಡಳಿಯ ಅತ್ಯುನ್ನತ ಹುದ್ದೆಯಾಗಿರುವ ಅಧ್ಯಕ್ಷ ಸ್ಥಾನವನ್ನು ಮುಂದಿನ ಚುನಾವಣೆಯಿಂದ ಮಹಿಳಾ ಸದಸ್ಯರಿಗೆ ಮೀಸಲಿಡಲಾಗುವುದು. ಈ ಮೂಲಕ ಪ್ರತಿ ಮೂರು ಅವಧಿಗಳಿಗೊಮ್ಮೆ ಮಹಿಳಾ ಸದಸ್ಯರು ಸಂಘವನ್ನು ಮುನ್ನಡೆಸುವ ಅವಕಾಶ ದೊರೆಯಲಿದೆ.
'ಇಂದಿನ ನಿರ್ಧಾರ ಐತಿಹಾಸಿಕವಾಗಿದ್ದು, ಬಹಳ ಹಿಂದಿನಿಂದ ಬಾಕಿ ಉಳಿದಿದ್ದ ತಿದ್ದುಪಡಿಗೆ ದಾರಿ ಮಾಡಿಕೊಟ್ಟಿದೆ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇತರ ಹುದ್ದೆಗಳಿಗೂ ಮೀಸಲಾತಿ
AAWI ಅಧ್ಯಕ್ಷ ಪ್ರಶಾಂತ್ ರೇಲೇಕರ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಸಾಂವಿಧಾನಿಕ ತಿದ್ದುಪಡಿ ಸಮಿತಿ ಸಲ್ಲಿಸಿದ ವರದಿಯನ್ನು ಪರಿಗಣಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಘದ ಕಾರ್ಯಕಾರಿ ನಾಯಕತ್ವದಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ವಿಸ್ತರಿಸುವ ಉದ್ದೇಶದಿಂದ ಅಗತ್ಯ ತಿದ್ದುಪಡಿಗಳನ್ನು ಶಿಫಾರಸು ಮಾಡುವ ಹೊಣೆಯನ್ನು ಸಮಿತಿಗೆ ವಹಿಸಲಾಗಿತ್ತು.
ಆಗಸ್ಟ್ 9ರಂದು ನಡೆದ AAWI ವಿಶೇಷ ಸಾಮಾನ್ಯ ಸಭೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು.
ಅಧ್ಯಕ್ಷ ಸ್ಥಾನವಲ್ಲದೆ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರ ಹುದ್ದೆಗಳಿಗೂ ಮಹಿಳೆಯರಿಗೆ ಮೀಸಲಾತಿ ಕಲ್ಪಿಸುವಂತೆ ಸಮಿತಿ ಶಿಫಾರಸು ಮಾಡಿದೆ. ಸಂಘದ ನಾಯಕತ್ವದ ಎಲ್ಲ ಹಂತಗಳಲ್ಲೂ ಲಿಂಗ ಸಮಾನ ಪ್ರಾತಿನಿಧ್ಯ ಕಲ್ಪಿಸುವುದು ಇದರ ಉದ್ದೇಶವಾಗಿದೆ.
ಇದು 2018ರಲ್ಲಿ AAWI ಕೈಗೊಂಡಿದ್ದ ಕ್ರಮದ ಮುಂದುವರಿಕೆಯಾಗಿದೆ. ಆಗ ಉಪಾಧ್ಯಕ್ಷ ಸ್ಥಾನ ಹಾಗೂ ಕಾರ್ಯಕಾರಿ ಮಂಡಳಿಯ ಇಬ್ಬರು ಸದಸ್ಯರ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿತ್ತು. ಮಹಿಳೆಯರ ನಾಯಕತ್ವದ ಭಾಗವಹಿಸುವಿಕೆ ಹೆಚ್ಚಿಸಲು ಕೈಗೊಂಡಿದ್ದ ಈ ಕ್ರಮವೇ ಇದೀಗ ಅಧ್ಯಕ್ಷ ಸ್ಥಾನ ಸೇರಿದಂತೆ ಸಂಘದ ಪ್ರಮುಖ ಹುದ್ದೆಗಳಿಗೆ ಮೀಸಲಾತಿ ಕಲ್ಪಿಸುವ ಬದಲಾವಣೆಗೆ ಅಡಿಪಾಯ ಹಾಕಿದೆ ಎಂದು AAWI ತಿಳಿಸಿದೆ ಎಂದು livelaw.in ವರದಿ ಮಾಡಿದೆ.

