ಕಾಸರಗೋಡು: ಐಸಿಎಆರ್-ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರ(ಸಿಸಪಿಸಿಆರ್‍ಐ)ವತಿಯಿಂದ 'ಕೃಷಿ ಕ್ಷೇತ್ರದಲ್ಲಿ ಗುಣಮಟ್ಟದ ಪ್ರಕಟಣೆಗಳು' ಎಂಬ ವಿಷಯದ ಕುರಿತು ಹಿಂದಿ ಭಾಷೆಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಕೇಂದ್ರದಲ್ಲಿ ಆಯೋಜಿಸಲಾಯಿತು.
ಸಿಪಿಸಿಆರ್‍ಐ ನಿರ್ದೇಶಕ ಡಾ. ಕೆ. ಬಾಲಚಂದ್ರ ಹೆಬ್ಬಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಆಡಳಿತಾಧಿಕಾರಿ ಆರ್.ಎನ್. ಸುಬ್ರಮಣಿಯನ್ ಸ್ವಾಗತಿಸಿದರು. ಅಧಿಕೃತ ಭಾಷಾ ವಿಭಾಗದ ಸದಸ್ಯ ಕಾರ್ಯದರ್ಶಿ ಎಚ್. ಮುರಳಿಕೃಷ್ಣ ವಂದಿಸಿದರು.
ತಾಂತ್ರಿಕ ಅಧಿವೇಶನಗಳಲ್ಲಿ, ಕೃಷಿ ವಲಯದ ಸಂಶೋಧನಾ ಪ್ರಕಟಣೆಗಳು ಮತ್ತು ಲೇಖನಗಳ ಕುರಿತು ಚರ್ಚೆ ನಡೆಸಲಾಯಿತು. ತಜ್ಞರು ಅಧಿವೇಶನ ನಡೆಸಿಕೊಟ್ಟರು. ಪ್ರಧಾನ ವಿಜ್ಞಾನಿ ಡಾ. ಎಸ್. ಜಯಶೇಖರ್ ಅವರು ಸಂಶೋಧನಾ ಪ್ರಕಟಣೆಗಳ ವಿಷಯವನ್ನು ನಿರ್ವಹಿಸಿದರು. ಹಿರಿಯ ವಿಜ್ಞಾನಿ ಡಾ. ಎಂ.ಆರ್. ಮಣಿಕಂದನ್ ಅವರು ವಿಚಾರ ಸಂಕಿರಣದ ಪ್ರಸ್ತುತಿಗಳ ಕುರಿತು ಮಾಹಿತಿ ನೀಡಿದರು. ವಿಜ್ಞಾನಿ ಡಾ. ಹಿಮಾ ಜಾನ್ ಅವರು ಜನಪ್ರಿಯ ವಿಜ್ಞಾನ ಲೇಖನಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭ ನೋಡಲ್ ಅಧಿಕಾರಿ ಮತ್ತು ಸಂಯೋಜಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಹಿಮಾ ಜಾನ್ ಅವರು ಸಂವಹನ ತಂತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳ ಕುರಿತು ಪ್ರಾಯೋಗಿಕ ತರಬೇತಿ ಅಧಿವೇಶನಗಳನ್ನು ನಡೆಸಿಕೊಟ್ಟರು. ಸಾಮಾಜಿಕ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಕೆ. ಪೆÇನ್ನುಸಾಮಿ ಅವರು ಸಂವಹನ ವಿಷಯದ ಕುರಿತು ಮಾತನಾಡಿದರು. ಪ್ರಧಾನ ವಿಜ್ಞಾನಿ ಹಾಗೂ ಪಿಎಂಇ ವಿಭಾಗದ ಉಸ್ತುವಾರಿ ಡಾ. ರವಿ ಭಟ್ ಅವರು ಸಂಕ್ಷಿಪ್ತ ಸಂವಹನಗಳ ಕುರಿತು ಚರ್ಚೆ ನಡೆಸಿದರು. ಹಿರಿಯ ವಿಜ್ಞಾನಿ ಡಾ. ಎಸ್.ವಿ. ರಮೇಶ್ ಅವರು ತಾಂತ್ರಿಕ ಕೈಪಿಡಿಗಳ ಕುರಿತು ಮಾಹಿತಿ ನೀಡಿದರು.



