ಭೋಪಾಲ್: ತಮ್ಮದಲ್ಲದ ತಪ್ಪಿಗೆ 14 ವರ್ಷಗಳ ಕಾಲ ಜೈಲಿನಲ್ಲಿ ಕೊಳೆತಿದ್ದ ಇಬ್ಬರು ವ್ಯಕ್ತಿಗಳಿಗೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ನಿರಾಳತೆಯನ್ನು ಒದಗಿಸಿದೆ. 2012ರಲ್ಲಿ ತೀರ್ಪು ಪ್ರಕಟಿಸುವಾಗ ವಿಚಾರಣಾ ನ್ಯಾಯಾಲಯವು ಬೇರೆ ಪ್ರಕರಣದ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯನ್ನು ಆಧರಿಸಿತ್ತು ಎನ್ನುವುದನ್ನು ಗಮನಿರುವ ಅದು ಕೊಲೆ ಪ್ರಕರಣದಲ್ಲಿ ಅವರ ದೋಷ ನಿರ್ಣಯವನ್ನು ರದ್ದುಗೊಳಿಸಿದೆ.
ಪ್ರಾಸಿಕ್ಯೂಷನ್ ಪ್ರಕರಣವು ಗಂಭೀರ ಲೋಪಗಳಿಂದ ಕೂಡಿದೆ ಎಂದು ಬಣ್ಣಿಸಿದ ನ್ಯಾಯಾಲಯವು, ಎಫ್‌ಐಆರ್ ಅನ್ನು ಗುರುತಿಸಲಾಗದ ಪೊಲೀಸ್ ಅಧಿಕಾರಿಯೊಬ್ಬರು ಬರೆದಿದ್ದಾರೆ ಮತ್ತು ಆ ಅಧಿಕಾರಿಯ ಸಾಕ್ಷ್ಯವನ್ನು ಎಂದಿಗೂ ದಾಖಲಿಸಲಾಗಿಲ್ಲ ಎನ್ನುವುದನ್ನು ಗಮನಿಸಿದೆ.
ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಕುಮಾರ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ತುಳಸಿರಾಮ್ ರಾಜಪಾಲ್ ಮತ್ತು ಹರ್‌ಪ್ರಸಾದ್ ಅವರನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದ ದಾಮೋಹ್‌ನ ವಿಶೇಷ ಸೆಷನ್ಸ್ ನ್ಯಾಯಾಲಯದ ಜೂನ್ 29,2012 ರ ತೀರ್ಪನ್ನು ರದ್ದುಗೊಳಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, ತನ್ನ ಮನೆಗೆ ನುಗ್ಗಿದ ಆರೋಪಿಗಳು ತನ್ನ ಕುಟುಂಬವನ್ನು ನಿಂದಿಸಿ, ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪ್ಯಾರೇಲಾಲ್ ಗಡಾರಿಯಾ ಎನ್ನುವವರು ಆಗಸ್ಟ್ 2,2009ರಂದು ಸಲ್ಲಿಸಿದ್ದರು. ಹರ್‌ಪ್ರಸಾದ್ ಹಾಗೂ ಮತ್ತೊಬ್ಬ ಆರೋಪಿ ಪ್ಯಾರೇಲಾಲ್ ಅವರನ್ನು ಹಿಡಿದುಕೊಂಡಿದ್ದರು ಮತ್ತು ತುಳಸಿರಾಮ್ ಅವರ ಹೊಟ್ಟೆಗೆ ಇರಿದಿದ್ದ ಎಂದು ಪ್ರಾಸಿಕ್ಯೂಷನ್ ಪ್ರತಿಪಾದಿಸಿತ್ತು. ಎಫ್‌ಐಆರ್ ದಾಖಲಿಸಿದ ಬಳಿಕ ಪ್ಯಾರೇಲಾಲ್ ಮೃತಪಟ್ಟಿದ್ದರು ಎನ್ನಲಾಗಿದೆ.
ಗುರುತಿಸಲಾದ ಎಫ್‌ಎಸ್‌ಎಲ್ ವರದಿಯು ಪ್ರಸ್ತುತ ಪ್ರಕರಣಕ್ಕೆ ಸೇರಿದ್ದಲ್ಲ, ಬದಲಿಗೆ ಸಂಪೂರ್ಣವಾಗಿ ಭಿನ್ನವಾದ ಆರೋಪಿಗಳು, ಆಯುಧಗಳು ಮತ್ತು ಗಾಯಗೊಂಡ ವ್ಯಕ್ತಿಗಳನ್ನು ಒಳಗೊಂಡ ಮತ್ತೊಂದು ಮೊಕದ್ದಮೆಗೆ ಸಂಬಂಧಿಸಿದೆ ಎಂದು ಹೈಕೋರ್ಟ್ ಕಂಡುಕೊಂಡಿದೆ.
'ವಿಚಾರಣಾ ನ್ಯಾಯಾಲಯದಿಂದ ಈ ನಿರ್ಲಕ್ಷ್ಯವು ಹೇಗೆ ಸಂಭವಿಸಿತು ಎನ್ನುವುದು ನಮಗೆ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿದೆ. ಅಂತಿಮ ವಾದದ ಸಮಯದಲ್ಲಿ ಅಥವಾ ವಿಚಾರಣೆಯ ಯಾವುದೇ ಹಂತದಲ್ಲಿಯೂ ಯಾವುದೇ ಪಕ್ಷವು ಈ ಅಂಶವನ್ನು ವಾದಿಸದಿರುವುದು ಆಶ್ಚರ್ಯಕರವಾಗಿದೆ; ಆದ್ದರಿಂದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎಚ್ಚರಿಕೆಯಿಂದ ಬರೆದಿಲ್ಲ ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ ಮತ್ತು ಈ ಒಂದೇ ಕಾರಣಕ್ಕಾಗಿ ತೀರ್ಪನ್ನು ರದ್ದುಗೊಳಿಸಬಹುದು ಎಂದು ಉಚ್ಚ ನ್ಯಾಯಾಲಯವು ಹೇಳಿದೆ.

