ಮುಂಬೈ: ಔಷಧ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ಅಧಿಕಾರವನ್ನು ಸಂಯಮದಿಂದ ಬಳಸಬೇಕು ಎಂದು ಬಾಂಬೆ ಹೈಕೋರ್ಟ್ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಸಂಸ್ಥೆ (ಈಆಂ)ಗೆ ಮಂಗಳವಾರ ಸೂಚಿಸಿತು. 'ಸೊಳ್ಳೆಯನ್ನು ಕೊಲ್ಲಲು ಕತ್ತಿ ಬಳಸಲಾಗುತ್ತಿದೆ' ಎಂದು ಈಆಂಯ ಕಾರ್ಯವೈಖರಿಯನ್ನು ನ್ಯಾಯಾಲಯ ಟೀಕಿಸಿತು.
ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ನ ಕೆಲವು ಔಷಧಗಳ ಮಾರಾಟ ಮತ್ತು ವಿತರಣೆಯನ್ನು ಮಹಾರಾಷ್ಟ್ರದಾದ್ಯಂತ ನಿಷೇಧಿಸಲು FDA ನಿರ್ಧರಿಸಿತ್ತು. ಇದೇ ವೇಳೆ, ಬ್ರ್ಯಾಂಡಿಂಗ್ ಒಂದೇ ರೀತಿಯಿದೆ ಎಂಬ ಕಾರಣಕ್ಕೆ ಕಂಪೆನಿಯ 2.45 ಕೋಟಿ ರೂ. ಮೌಲ್ಯದ ಉತ್ಪನ್ನಗಳ ದಾಸ್ತಾನನ್ನು ರಾಜ್ಯದಾದ್ಯಂತ ಮುಟ್ಟುಗೋಲು ಹಾಕಿಕೊಳ್ಳಲು FDA ನಿರ್ಧರಿಸಿತ್ತು.
ಈ ಕ್ರಮವನ್ನು ಪ್ರಶ್ನಿಸಿ ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಖಡ್ ಅವರನ್ನೊಳಗೊಂಡ ನ್ಯಾಯಪೀಠ ಅರ್ಜಿಯ ವಿಚಾರಣೆ ನಡೆಸಿತು.
►'ಮೊದಲು ವಾದ ಆಲಿಸಿ'
ಯಾವುದೇ ಔಷಧ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳುವ ಮೊದಲು ಅದರ ವಾದವನ್ನು ಆಲಿಸಬೇಕು ಎಂದು ನ್ಯಾಯಪೀಠ ಹೇಳಿತು.
'ನಿಮಗೆ ಕತ್ತಿಯನ್ನು ಬಳಸುವ ಅಧಿಕಾರವಿದೆ. ಆದರೆ, ಸೊಳ್ಳೆಯನ್ನು ಕೊಲ್ಲಲು ಕತ್ತಿಯನ್ನು ಬಳಸುತ್ತಿದ್ದೀರಿ. ಅಧಿಕಾರವನ್ನು ಸಂಯಮದಿಂದ ಚಲಾಯಿಸಬೇಕು. ಅದನ್ನು ಸಮರ್ಪಕವಾಗಿ ಬಳಸಬೇಕು' ಎಂದು ನ್ಯಾಯಪೀಠ FDAಗೆ ತಿಳಿಸಿತು.
'ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳ ವಿಚಾರದಲ್ಲೂ ನೀವು ಮೊದಲು ಗುಂಡು ಹಾರಿಸುತ್ತೀರಿ, ಬಳಿಕ ಪ್ರಶ್ನೆಗಳನ್ನು ಕೇಳುತ್ತೀರಿ' ಎಂದು ನ್ಯಾಯಪೀಠ ಟೀಕಿಸಿತು.
ರಾಜ್ಯದಾದ್ಯಂತ ಹಲವು ಪ್ರಕರಣಗಳಲ್ಲಿ FDA ಇದೇ ರೀತಿಯ ಕ್ರಮ ಕೈಗೊಂಡಿರುವುದು ನ್ಯಾಯಾಲಯದ ಗಮನಕ್ಕೆ ಬಂದಿದೆ ಎಂದು ನ್ಯಾಯಪೀಠ ಹೇಳಿತು. FDA ವಿರುದ್ಧ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿತು.
►ಸರಕಾರದ ಸ್ಪಷ್ಟನೆ
ಸರಕಾರದ ಪರ ವಕೀಲೆ ನೇಹಾ ಭಿಡೆ ಅವರು, FDA ತನ್ನ ಹಿಂದಿನ ಆದೇಶಗಳನ್ನು ಹಿಂಪಡೆಯಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಸಂಬಂಧಿಸಿದವರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗುವುದು. ಬಳಿಕ ಸಕಾರಣ ಆದೇಶ ಹೊರಡಿಸುವ ಮೊದಲು ಅವರ ವಾದವನ್ನು ಆಲಿಸಲಾಗುವುದು ಎಂದರು.
ಇದಕ್ಕೆ ಸರಕಾರದ ಪರ ವಕೀಲರು, ಸಂಬಂಧಿಸಿದ ಔಷಧಗಳ ನಡುವೆ ಗೊಂದಲವಿದೆ. FDA ತೆಗೆದುಕೊಂಡಿರುವ ನಿರ್ಧಾರ ಮುಂಜಾಗ್ರತಾ ಕ್ರಮವಾಗಿದೆ. ಇದು ಅತಿರೇಕದ ಕ್ರಮವಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿಯ ವಿಲೇವಾರಿ
ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ವಿರುದ್ಧದ ಆದೇಶಗಳನ್ನು FDA ಹಿಂಪಡೆಯಲಿದೆ ಮತ್ತು ಕಂಪೆನಿಗೆ ತನ್ನ ವಾದ ಮಂಡಿಸಲು ಅವಕಾಶ ನೀಡಲಿದೆ ಎಂಬ ನೇಹಾ ಭಿಡೆ ಅವರ ಹೇಳಿಕೆಯನ್ನು ನ್ಯಾಯಾಲಯ ಅಂಗೀಕರಿಸಿತು.
ಈ ಹೇಳಿಕೆಯನ್ನು ದಾಖಲಿಸಿಕೊಂಡ ನ್ಯಾಯಪೀಠ, ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.

