ಲಾತೂರ್: ತಾನು ಲಾತೂರ್ನ ಸರಕಾರಿ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯಲ್ಲಿ ನೋಂದಾಯಿಸಿಕೊಂಡಿರದ ವಿದ್ಯಾರ್ಥಿಗಳು ತರಗತಿಗಳಲ್ಲಿ ಕುಳಿತಿರುವುದು ಮತ್ತು ಶಾಲೆಯ ಆವರಣದಲ್ಲಿ ಮದ್ಯದ ಬಾಟಲಿಗಳು ಇರುವುದು ಕಂಡುಬಂದಿದೆ ಎಂದು ಹೇಳಿದ್ದಾರೆ.
ಸರಕಾರಿ ಶಾಲೆಗಳಲ್ಲಿನ ಸಮಸ್ಯೆಗಳನ್ನು ಎತ್ತಿ ತೋರಿಸುವ ತನ್ನ 'ಸ್ಕೂಲ್ ಠೀಕ್ ಕರೋ' ಅಭಿಯಾನದಡಿ ದೀಪ್ಕೆ ಈ ಶಾಲೆಗೆ ಭೇಟಿ ನೀಡಿದ್ದರು.
ಪ್ರದೇಶದಲ್ಲಿ ಶಾಲೆಗಳ ದುಸ್ಥಿತಿಗೆ ಕಾರಣರಾದ ಬ್ಲಾಕ್ ಶಿಕ್ಷಣಾಧಿಕಾರಿಗಳನ್ನು ಎಂಟು ದಿನಗಳಲ್ಲಿ ಅಮಾನತುಗೊಳಿಸುವಂತೆ ಆಗ್ರಹಿಸಿದ ದೀಪ್ಕೆ, ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿರಲಿಲ್ಲ ಮತ್ತು ತನ್ನ ಭೇಟಿಗೆ ಕೆಲವೇ ಸಮಯದ ಮೊದಲು ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗಿತ್ತು ಎಂದು ಹೇಳಿದರು.
ತನ್ನ ಭೇಟಿಗೂ ಮುನ್ನ ಇಡೀ ಶಾಲಾ ಆವರಣವನ್ನು ಸ್ವಚ್ಛಗೊಳಿಸಲಾಗಿತ್ತು ಹಾಗೂ ಭೇಟಿಯ ಸಮಯದಲ್ಲಿ ತೆಗೆದ ಛಾಯಾಚಿತ್ರಗಳು ಶಾಲೆಯ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದನ್ನು ಸೂಚಿಸುತ್ತವೆ. ಅಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ ಎಂದು ದೀಪ್ಕೆ ತಿಳಿಸಿದರು.
ದೀಪ್ಕೆ ಈ ಬಗ್ಗೆ ಶಿಕ್ಷಕರೊಬ್ಬರನ್ನು ಪ್ರಶ್ನಿಸಿದಾಗ, ಬೋಗಸ್ ವಿದ್ಯಾರ್ಥಿಗಳನ್ನು ಯಾರು ಕರೆತಂದಿದ್ದಾರೆ ಎನ್ನುವುದು ತನಗೆ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆನ್ನಲಾಗಿದೆ. ಮಳೆನೀರಿನಿಂದಾಗಿ ಶಾಲೆಯ ಗೋಡೆಗಳಿಗೆ ಹಾನಿಯಾಗಿರುವುದನ್ನೂ ದೀಪ್ಕೆ ಬೆಟ್ಟು ಮಾಡಿದರು.
'ಸರಕಾರಿ ಶಾಲೆಗಳಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರಕಾರವು ವಿಫಲಗೊಂಡಿದೆ ಮತ್ತು ವಿದ್ಯಾರ್ಥಿಗಳಿಗೆ ಸಮಾನ ಅವಕಾಶಗಳು ಸಿಗುತ್ತಿಲ್ಲ. ಪ್ರತಿಯೊಬ್ಬ ಮಗುವಿಗೆ ಸಮಾನ ಅವಕಾಶ ಸಿಗುವವರೆಗೆ ದೇಶವು ನಿಜವಾಗಿಯೂ ಅಭಿವೃದ್ಧಿ ಹೊಂದುತ್ತಿದೆ ಎಂದು ನಾವು ಹೇಳಿಕೊಳ್ಳಲಾಗುವುದಿಲ್ಲ' ಎಂದು ದೀಪ್ಕೆ ಹೇಳಿದರು.

