ನವದೆಹಲಿ (PTI): ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ನೀಟ್-ಯುಜಿ ಮರು ಪರೀಕ್ಷೆಯ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳಲ್ಲಿ ಯಾವುದೇ ರೀತಿಯ ತಿರುಚುವಿಕೆ ನಡೆದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ವೇಳೆ ಮಾತನಾಡಿದ ಅವರು, ಮರು ಪರೀಕ್ಷೆಯಲ್ಲಿ ದೊಡ್ಡ ಪ್ರಮಾಣದ ತಿರುಚುವಿಕೆ ನಡೆದಿದೆ ಎಂದು ಆರೋಪಿಸುವ ಮೂಲಕ ನಿರ್ದಿಷ್ಟ ಸಂಕಥನಗಳನ್ನು ಸೃಷ್ಟಿಸಲಾಗುತ್ತಿದ್ದು, ಅಂಥ ವಾದಗಳನ್ನು ಪುರಸ್ಕರಿಸಬಾರದು ಎಂದು ಕೋರಿದರು.
'ತಿರುಚುವಿಕೆಯ ಘಟನೆಗಳೇನು ನಡೆದಿಲ್ಲ. ಆ ವಿಷಯವನ್ನು ಭಾವೋದ್ರೇಕಗೊಳಿಸಬಾರದು' ಎಂದು ಅವರು ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ, ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರಿದ್ದ ಪೀಠದ ಮುಂದೆ ಪ್ರತಿಪಾದಿಸಿದರು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಕೈಬಿಟ್ಟ ಪ್ರಶ್ನೆಗಳಿಗೆ ನೀಡಿರುವ ಕೃಪಾಂಕವನ್ನು ಎಲ್ಲ ಅಭ್ಯರ್ಥಿಗಳಿಗೂ ನೀಡಬೇಕು ಮತ್ತು ಎನ್‌ಟಿಎ ಅನ್ನು ರದ್ದುಗೊಳಿಸಬೇಕು ಎಂದು ಕೋರಿ ಇಬ್ಬರು ನೀಟ್-ಯುಜಿ ಅಭ್ಯರ್ಥಿಗಳು ಸಲ್ಲಿಸಿದ್ದ ಪಿಐಎಲ್‌ನ ವಿಚಾರಣೆಯನ್ನು ಪೀಠ ನಡೆಸಿತು. ಈ ಅರ್ಜಿದಾರರಲ್ಲಿ ಒಬ್ಬರು ತಮ್ಮ ಒಎಂಆರ್ ಶೀಟ್ ಅನ್ನು ತಿರುಚಲಾಗಿದೆ ಎಂದೂ ಆರೋಪಿಸಿದ್ದರು.
ಪ್ರಶ್ನೆಪತ್ರಿಕೆ ಮೇಲಿನ 'ರಫ್‌ವರ್ಕ್' ಮತ್ತು 'ಒಎಂಆರ್ ಶೀಟ್'ನಲ್ಲಿ ಗುರುತಿಸಲಾದ ಉತ್ತರಗಳ ನಡುವಿನ ಹೊಂದಾಣಿಕೆಯ ಕೊರತೆಗೆ ಸಂಬಂಧಿಸಿದ್ದಂತೆ ತೋರುತ್ತಿದೆಯೇ ಹೊರತು ಅಲ್ಲಿ ಯಾವುದೇ ರೀತಿಯ ತಿರುಚುವಿಕೆ ನಡೆದಿಲ್ಲ ಎಂದ ಮೆಹ್ತಾ ಅವರು ಅಷ್ಟಕ್ಕೂ ಅದನ್ನು ಯಾರು ತಾನೇ ತಿರುಚುತ್ತಾರೆ? ಎಂದು ಪ್ರಶ್ನಿಸಿದರು.
ಪರಿಗಣನೆಗೆ ನಕಾರ:
ಅರ್ಜಿಯಲ್ಲಿ ಕೋರಲಾದ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ ನ್ಯಾಯಪೀಠವು, ಪಿಐಎಲ್ ಪರಿಗಣಿಸಲು ನಿರಾಕರಿಸಿತು. ಸಂತ್ರಸ್ತ ವಿದ್ಯಾರ್ಥಿಯು ಪಿಐಎಲ್ ಬದಲಿಗೆ, ವೈಯಕ್ತಿಕ ನೆಲೆಯಲ್ಲಿ ನ್ಯಾಯಾಲಯವನ್ನು ಸಂಪರ್ಕಿಸಿದರೆ ಪರಿಗಣಿಸುವುದಾಗಿ ಪೀಠ ತಿಳಿಸಿತು.
ನೀಟ್ ನಂತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಸಾಂಸ್ಥಿಕ ಸುಧಾರಣೆಗಳ ಕುರಿತು ಪ್ರತ್ಯೇಕ ಪಿಐಎಲ್ ಸಲ್ಲಿಸಲು ಒಬ್ಬ ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿತು. ಅಲ್ಲದೆ ಒಎಂಆರ್ ಶೀಟ್‌ಗಳ ತಿರುಚುವಿಕೆ ಆರೋಪ ಕುರಿತು ಪ್ರತ್ಯೇಕ ಅರ್ಜಿ ಸಲ್ಲಿಸಲು ಪೀಠ ಅನುಮತಿ ನೀಡಿತು.
ಯುಜಿಸಿ-ನೆಟ್ ಮರು ಪರೀಕ್ಷೆ:
ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳ ಕುರಿತಾದ ದೂರುಗಳ ಹಿನ್ನೆಲೆಯಲ್ಲಿ ಸಮಾಜಶಾಸ್ತ್ರ ಸೇರಿದಂತೆ ಯುಜಿಸಿ-ನೆಟ್‌ನ ಮೂರು ವಿಷಯಗಳಿಗೆ ಮರು ಪರೀಕ್ಷೆ ನಡೆಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಇಂಗ್ಲಿಷ್ ಮತ್ತು ವಾಣಿಜ್ಯ ಶಾಸ್ತ್ರ ವಿಷಯಗಳ ಮರು ಪರೀಕ್ಷೆಗಳು ಸೆ.9ರಂದು ಮತ್ತು ಸಮಾಜಶಾಸ್ತ್ರ ವಿಷಯದ ಮರು ಪರೀಕ್ಷೆ ಸೆ. 10ರಂದು ನಡೆಯಲಿವೆ ಎಂದು ಸಾಲಿಸಿಟರ್ ಜನರಲ್ ಮಾಹಿತಿ ನೀಡಿದರು.
ಜೂನ್ 30ರಂದು ನಡೆದಿದ್ದ ಸಮಾಜಶಾಸ್ತ್ರ ಪರೀಕ್ಷೆ ಬರೆದಿದ್ದ ಅಭ್ಯರ್ಥಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರ ಪೀಠ ವಿಚಾರಣೆ ನಡೆಸಿತು. ಮರು ಪರೀಕ್ಷೆಗೆ ಸರ್ಕಾರ ನಿರ್ಧರಿಸಿರುವುದರಿಂದ ಈ ಅರ್ಜಿಯನ್ನು ವಿಲೇವಾರಿ ಮಾಡಲಾಗಿದೆ ಎಂದು ಪೀಠ ಹೇಳಿತು.

