ಜೈಪುರ: ರಾಜಸ್ಥಾನ ಸರಕಾರವು ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ನಿಯಂತ್ರಿಸುವ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು, ರಾಜ್ಯಾದ್ಯಂತ ನಡೆಯುವ ರಕ್ತದಾನ ಶಿಬಿರಗಳಲ್ಲಿ ಈ ಹಿಂದಿನ ಶೇ.20ರ ಬದಲಿಗೆ ಶೇ.50ರಷ್ಟು ರಕ್ತದ ಯುನಿಟ್‌ಗಳನ್ನು ಸಂಗ್ರಹಿಸುವಂತೆ ಸರಕಾರಿ ಬ್ಲಡ್ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.
ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯು ಪರಿಷ್ಕೃತ ಮಾರ್ಗಸೂಚಿಗಳನ್ನು ಅಧಿಸೂಚಿಸಿ ಸುತ್ತೋಲೆಯನ್ನು ಶುಕ್ರವಾರ ಹೊರಡಿಸಿದೆ.
ಪರಿಷ್ಕೃತ ಮಾರ್ಗಸೂಚಿಗಳಡಿ ಸರಕಾರಿ ಬ್ಲಡ್ ಬ್ಯಾಂಕ್‌ಗಳು ಸ್ವಯಂಪ್ರೇರಿತ ರಕ್ತದಾನ ಶಿಬಿರಗಳಿಗೆ ತಮ್ಮ ವೈದ್ಯಕೀಯ ತಂಡಗಳನ್ನು ನಿಯೋಜಿಸಲಿವೆ ಹಾಗೂ ಔಷಧಿಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆಯ ನಿಬಂಧನೆಗಳಿಗೆ ಅನುಗುಣವಾಗಿ ರಕ್ತ ಸಂಗ್ರಹಣೆಯನ್ನು ಕೈಗೊಳ್ಳುತ್ತವೆ. ಸುರಕ್ಷಿತ ರಕ್ತ ಸಂಗ್ರಹಣೆಗೆ ಅಗತ್ಯವಿರುವ ಔಷಧಗಳು, ಉಪಕರಣಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಈ ತಂಡಗಳು ಹೊಂದಿರುತ್ತವೆ.
ಹೊಸ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವಲ್ಲಿ ನಿರ್ಲಕ್ಷ್ಯ ಕಂಡುಬಂದರೆ ಅಥವಾ ಅಗತ್ಯವಿದ್ದಾಗ ರೋಗಿಗಳಿಗೆ ರಕ್ತದ ಅಭಾವ ಎದುರಾದರೆ ಸಂಬಂಧಪಟ್ಟ ಬ್ಲಡ್ ಬ್ಯಾಂಕ್‌ಗಳನ್ನೇ ಉತ್ತರದಾಯಿಯನ್ನಾಗಿ ಮಾಡಲಾಗುವುದು ಎಂದು ಇಲಾಖೆಯು ಎಚ್ಚರಿಕೆ ನೀಡಿದೆ.

