ಮುಂಬೈ: ಪಾಕಿಸ್ತಾನ ಮತ್ತು ಚೀನಾ ಜತೆ ಭಾರತ ಈಗಾಗಲೇ ಹೊಂದಿರುವ ಸಂಬಂಧಗಳನ್ನು ಕಡಿದುಕೊಳ್ಳಬಾರದು. ಸಂಘರ್ಷ ಅಥವಾ ಭಯೋತ್ಪಾದನೆಯ ಸಂದರ್ಭದಲ್ಲಿ ಮಾತ್ರ ಸಂಬಂಧಗಳನ್ನು ತಾತ್ಕಾಲಿಕವಾಗಿ ತಡೆಹಿಡಿಯಬಹುದು. ಅಂತಹ ಸಂದರ್ಭಗಳಲ್ಲಿ ಜನರು ಭಾರತ ಸರಕಾರ ಮತ್ತು ಸಶಸ್ತ್ರ ಪಡೆಗಳ ಜತೆ ನಿಲ್ಲಬೇಕು ಎಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಖSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು.
ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 'ಶಾಶ್ವತ ದ್ವೇಷವು ಯಾವುದೇ ಪರಿಹಾರವಲ್ಲ. ಸಂಘರ್ಷದ ಸಂದರ್ಭದಲ್ಲಿ ಅಥವಾ ಭಯೋತ್ಪಾದನೆಯ ಘಟನೆಗಳು ನಡೆದಾಗ ನಾವು ಸರಕಾರ ಮತ್ತು ಸೈನ್ಯದ ಜತೆ ನಿಲ್ಲಬೇಕಾಗುತ್ತದೆ' ಎಂದರು.
'ಭಾರತ ಮತ್ತು ಚೀನಾ ನಡುವಿನ ಸಂಬಂಧಗಳು ಹಲವು ಶತಮಾನಗಳಷ್ಟು ಹಳೆಯವು. ಪಾಕಿಸ್ತಾನದ ವಿಷಯಕ್ಕೆ ಬಂದರೆ, ಅದು ಭಾರತದ ಭಾಗವಾಗಿತ್ತು. ಮಿಲಿಟರಿ ಸಂಘರ್ಷ ಅಥವಾ ಭಯೋತ್ಪಾದನೆಯ ಅವಧಿಯಲ್ಲಿ ನಾಗರಿಕರು ಭಾರತ ಸರಕಾರ ಮತ್ತು ಸಶಸ್ತ್ರ ಪಡೆಗಳ ಜತೆ ನಿಲ್ಲಬೇಕು' ಎಂದು ಹೇಳಿದರು.
ಪ್ರಾಚೀನ ಸಂಬಂಧಗಳನ್ನು ಮರೆಯಬಾರದು ಎಂದು ಪ್ರತಿಪಾದಿಸಿದ ಅವರು, 'ಈ ಸಂಬಂಧಗಳನ್ನು ಮುರಿಯಲು ಸಾಧ್ಯವಿಲ್ಲ. ಸಂಘರ್ಷವಿದ್ದಾಗ ಅವುಗಳನ್ನು ತಡೆಹಿಡಿಯಬಹುದು. ಆದರೆ ಸಂಬಂಧಗಳನ್ನು ಮುರಿಯುವುದು ಪರಿಹಾರವಲ್ಲ' ಎಂದರು.
'ಭಾರತದ ನಿಲುವು ಎಂದರೆ ಮತ್ತೊಂದು ದೇಶವನ್ನು ಗೆದ್ದು, ನಾಶಪಡಿಸುವುದಲ್ಲ. ಬದಲಾಗಿ, ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು. ಅದಕ್ಕಾಗಿ ಮಾತುಕತೆ ನಡೆಯಬೇಕು. ಘರ್ಷಣೆಗಳು ಈ ಎಲ್ಲ ಸಂಬಂಧಗಳನ್ನು ನಿಲ್ಲಿಸಬಹುದು. ಆದರೆ ಅವುಗಳನ್ನು ಮುರಿಯಲು ಸಾಧ್ಯವಿಲ್ಲ; ಹಾಗೆ ಮಾಡಬಾರದು ಕೂಡ' ಎಂದು ಭಾಗವತ್ ಹೇಳಿದರು.
LGBTQ ಸಮುದಾಯ, ಸಲಿಂಗ ವಿವಾಹದ ಕುರಿತು
LGBTQ ಸಮುದಾಯ ಮತ್ತು ಸಲಿಂಗ ವಿವಾಹಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಭಾಗವತ್, 'LGBTQ ಆಗಿರಲಿ ಅಥವಾ ಇತರರಾಗಿರಲಿ, ಅವರೆಲ್ಲರೂ ನಾವು ಸೇರಿರುವ ಸಮಾಜದ ಭಾಗವೇ. ಅವರನ್ನು ಒಪ್ಪಿಕೊಳ್ಳುವ ಸಂಪ್ರದಾಯ ನಮ್ಮ ಸಮಾಜದಲ್ಲಿದೆ' ಎಂದರು.
ಆದರೆ ಕುಟುಂಬ ಘಟಕದ ದೃಷ್ಟಿಯಿಂದ ವಿವಾಹಕ್ಕೆ ಬೇರೆಯದೇ ಅರ್ಥವಿದೆ ಎಂದು ಅವರು ಉಲ್ಲೇಖಿಸಿದರು.
'ನಮ್ಮ ಸಂಪ್ರದಾಯದಲ್ಲಿ ವಿವಾಹವೆಂದರೆ ಇಬ್ಬರು ವ್ಯಕ್ತಿಗಳು ಒಟ್ಟಿಗೆ ವಾಸಿಸಲು ಮಾಡಿಕೊಂಡಿರುವ ಅನುಕೂಲದ ವ್ಯವಸ್ಥೆಯಲ್ಲ' ಎಂದ ಅವರು, ವಿವಾಹದ ಸಂಸ್ಥೆಯ ಮೂಲಕ ಕುಟುಂಬ ವ್ಯವಸ್ಥೆ ರೂಪುಗೊಳ್ಳುತ್ತದೆ ಎಂದು ವಿವರಿಸಿದರು.
'ಕುಟುಂಬವು ಸಮಾಜದ ಒಂದು ಘಟಕ. ಮುಂದಿನ ಪೀಳಿಗೆಗಳು ಆ ದೇಶದ ಉತ್ತಮ ನಾಗರಿಕರಾಗಲು ಕುಟುಂಬದಲ್ಲಿ ತರಬೇತಿ ಪಡೆಯುತ್ತವೆ. ತಾಯಿ-ತಂದೆ ಸೇರಿದಂತೆ ಕುಟುಂಬದಲ್ಲಿನ ವಿವಿಧ ಸಂಬಂಧಗಳ ಮೂಲಕ ಮುಂದಿನ ಪೀಳಿಗೆಗೆ ತರಬೇತಿ ನೀಡಲಾಗುತ್ತದೆ. ಇದೂ ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಪ್ರಾಚೀನ ವ್ಯವಸ್ಥೆ' ಎಂದು ಹೇಳಿದರು.
'ನಾವು ಮೊದಲು ಕೆಲವು ವ್ಯವಸ್ಥೆಯನ್ನು ಹೊಂದಿರಬೇಕು. ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಅಡ್ಡಿಪಡಿಸಿ, ನಮ್ಮಲ್ಲಿ ಹೊಸ ವ್ಯವಸ್ಥೆಗಳಿಲ್ಲದಿದ್ದರೆ ಅದು ಸಂಘರ್ಷವನ್ನು ಸೃಷ್ಟಿಸುತ್ತದೆ' ಎಂದು ಭಾಗವತ್ ಅಭಿಪ್ರಾಯಪಟ್ಟರು.

