ನವದೆಹಲಿ: ಆಂಧ್ರಪ್ರದೇಶ ಹಾಗೂ ಹರಿಯಾಣದ ಮತದಾರರ ಕರಡುಪಟ್ಟಿ ಶುಕ್ರವಾರ ಪ್ರಕಟವಾಗಿದ್ದು, ಡಿಲಿಟ್ ಮಾಡಲಾದ ಹೆಸರುಗಳ ಸಂಖ್ಯೆ ಮತದಾರರ ಪಟ್ಟಿಯ ಸಮಗ್ರ (ಎಸ್‌ಐಎಸ್) ಪರಿಷ್ಕರಣೆಯ ಮೂರನೇ ಹಂತದ ಬಳಿಕ ಒಂದು ಕೋಟಿ ದಾಟಿದೆ.
ಈವರೆಗೆ ಒಟ್ಟು ಹತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿಗಳನ್ನು ಪ್ರಕಟಿಸಲಾಗಿದೆ.
ಇಲ್ಲಿನ 10.89 ಕೋಟಿ ಮತದಾರರ ಪೈಕಿ, ನಿಧನ, ಶಾಶ್ವತ ಸ್ಥಳಾಂತರ ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಣಿಯಾಗಿರುವ ಕಾರಣದಿಂದಾಗಿ 1.13 ಕೋಟಿ ಹೆಸರುಗಳನ್ನು ಡಿಲಿಟ್ ಮಾಡಲಾಗಿದೆ. ಉಳಿದಂತೆ 9.75 ಕೋಟಿ ಜನರ ಹೆಸರುಗಳನ್ನು ಉಳಿಸಿಕೊಳ್ಳಲಾಗಿದೆ.
ಇನ್ನೂ ಒಂಬತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮತದಾರರ ಕರಡು ಪಟ್ಟಿಗಳನ್ನು ಆಗಸ್ಟ್ 5ರಿಂದ ಅಕ್ಟೋಬರ್ 21ರ ನಡುವೆ ಬಿಡುಗಡೆ ಮಾಡಲಾಗುತ್ತದೆ.
ಬಿಹಾರದಲ್ಲಿ 2025ರ ಜೂನ್‌ನಲ್ಲಿ ಎಸ್‌ಐಆರ್ ಪ್ರಕ್ರಿಯೆ ಆರಂಭವಾದಾಗಿನಿಂದ 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ, ಪರಿಶೀಲನಾ ಕಾರ್ಯ ಪೂರ್ಣಗೊಂಡಿದೆ. ಸುಮಾರು 5.83 ಕೋಟಿ ಹೆಸರುಗಳ ಈವರೆಗೆ ಡಿಲಿಟ್ ಆಗಿವೆ.
ಆಂಧ್ರಪ್ರದೇಶ
ಆಂಧ್ರಪ್ರದೇಶದಲ್ಲಿ ಒಟ್ಟು 44.89 ಲಕ್ಷ (ಶೇ 10.78) ಹೆಸರುಗಳನ್ನು ಅಳಿಸಲಾಗಿದೆ. ಇದರೊಂದಿಗೆ ಮತದಾರರ ಸಂಖ್ಯೆ 4.16 ಕೋಟಿಯಿಂದ 3.71 ಕೋಟಿಗೆ ಇಳಿದಿದೆ. ಹೆಸರು ಡಿಲಿಟ್ ಮಾಡಲಾದವರ ಪೈಕಿ 22.30 ಲಕ್ಷ ಜನರು ಶಾಶ್ವತವಾಗಿ ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದಾರೆ. 15.22 ಲಕ್ಷ ಜನರು ಮೃತರಾಗಿದ್ದಾರೆ. 7.37 ಲಕ್ಷ ಜನರು ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡಿದ್ದರು.
ಹರಿಯಾಣ
ರಾಜ್ಯದಲ್ಲಿ ಒಟ್ಟು 33.83 ಲಕ್ಷ (ಶೇ 16.38%) ಹೆಸರುಗಳನ್ನು ತೆಗೆಯಲಾಗಿದೆ. ಈ ಪೈಕಿ, 24.13 ಲಕ್ಷ ಮಂದಿಯ ವಿಳಾಸ ಬದಲಾಗಿದೆ. 7.66 ಲಕ್ಷ ಜನರು ಸಾವನ್ನಪ್ಪಿದ್ದು, 2.04 ಲಕ್ಷ ಜನರು ವಿವಿಧೆಡೆ ಹೆಸರು ನೋಂದಾಯಿಸಿಕೊಂಡಿದ್ದರು. ಹರಿಯಾಣದಲ್ಲಿ ಸದ್ಯ 1.72 ಕೋಟಿ ಮತದಾರರಿದ್ದಾರೆ. ಈ ಸಂಖ್ಯೆ, ಪಟ್ಟಿ ಪರಿಷ್ಕರಣೆಗೂ ಮುನ್ನ 2.06 ಕೋಟಿ ಇತ್ತು.
ಆಂಧ್ರಪ್ರದೇಶ, ಹರಿಯಾಣ ಮಾತ್ರವಲ್ಲದೆ, ಈವರೆಗೆ ಒಡಿಶಾ, ಮಣಿಪುರ, ಮಿಜೋರಾಂ, ಸಿಕ್ಕಿಂ, ದಾದ್ರಾ ಮತ್ತು ನಗರ ಹವೇಲಿ, ದಮನ್ ಮತ್ತು ದಿಯು, ಉತ್ತರಾಖಂಡ, ಚಂಡೀಗಢ ಮತ್ತು ಅರುಣಾಚಲ ಪ್ರದೇಶದ ಕರಡು ಪಟ್ಟಿಗಳನ್ನು ಪ್ರಕಟವಾಗಿದೆ.

