ತಿಂಗಳ ಆರಂಭದಲ್ಲಿ ಒಂದಷ್ಟು ಹೊಸ ಬದಲಾವಣೆಗಳಾಗುವುದು ಸಹಜ. ಬೆಲೆ ಏರಿಕೆ- ಇಳಿಕೆ, ಹೊಸ ನಿಯಮಗಳು ಹೀಗೆ ಒಂದಲ್ಲ ಒಂದು ಹೊಸತಿರುತ್ತದೆ. ಅದೇ ರೀತಿ ಸೆಪ್ಟೆಂಬರ್1ರಿಂದಲೂ ಒಂದಷ್ಟು ಬದಲಾವಣೆಗಳಾಗಿವೆ. ಅವುಗಳನ್ನು ನೋಡುವುದಾದರೆ,
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ
ತೈಲ ಕಂಪನಿಗಳು ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಿವೆ. ಪ್ರತಿ ಸಿಲಿಂಡರ್ ಮೇಲೆ ₹9 ಏರಿಕೆಯಾಗಿದೆ. ಈ ಮೂಲಕ ದೆಹಲಿಯಲ್ಲಿ ಸಿಲಿಂಡರ್ ಬೆಲೆ ₹2,747 ಆಗಿದೆ. 14 ಕೆ.ಜಿ. ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಎಲ್‌ಪಿಜಿ ಸಬ್ಸಿಡಿ ಇ-ಕೆವೈಸಿ ಸ್ಥಗಿತ
ಎಲ್‌ಪಿಜಿ ಸಬ್ಸಿಡಿ ಪಡೆಯುವುದನ್ನು ಮುಂದುವರಿಸಲು ಇ-ಕೆವೈಸಿ ಪೂರ್ಣಗೊಳಿಸಲು ಆಗಸ್ಟ್ 31 ಕೊನೆಯ ದಿನಾಂಕವಾಗಿತ್ತು.
ಈಗ ಗಡುವು ಮುಗಿದ ಕಾರಣ ಬಯೋಮೆಟ್ರಿಕ್ ಪರಿಶೀಲನೆಯನ್ನು ಪೂರ್ಣಗೊಳಿಸದ ಗ್ರಾಹಕರ ಸಬ್ಸಿಡಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಜತೆಗೆ ಅವರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಪಡೆಯುವಲ್ಲಿಯೂ ತೊಂದರೆಗಳನ್ನು ಎದುರಿಸಬಹುದು.
ಅಂತರರಾಷ್ಟ್ರೀಯ ಪ್ರಯಾಣದ ಬೋರ್ಡಿಂಗ್ ಪಾಸ್ ಮೇಲೆ ಸ್ಟ್ಯಾಂಪ್ಅಗತ್ಯವಿಲ್ಲ
ಸೆಪ್ಟೆಂಬರ್ 1ರಿಂದ ಭಾರತದಿಂದ ವಿದೇಶಕ್ಕೆ ಪ್ರಯಾಣಿಸುವ ಪ್ರಯಾಣಿಕರು ವಲಸೆ ಕೌಂಟರ್‌ಗಳಲ್ಲಿ ತಮ್ಮ ಬೋರ್ಡಿಂಗ್ ಪಾಸ್‌ಗಳನ್ನು ಸ್ಟ್ಯಾಂಪ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ. ಈ ಪ್ರಕ್ರಿಯೆಯು ಈಗ ಡಿಜಿಟಲ್ ಆಗಿದೆ.
ಪ್ರಯಾಣಿಕರು ಈಗ ತಮ್ಮ ಫೋನ್‌ಗಳಲ್ಲಿ ತಮ್ಮ ಇ-ಬೋರ್ಡಿಂಗ್ ಪಾಸ್‌ಗಳನ್ನು ತೋರಿಸಬಹುದು. ಪಾಸ್‌ಪೋರ್ಟ್, ವೀಸಾ ಮತ್ತು ಭದ್ರತಾ ತಪಾಸಣೆಗಳಿಗೆ ಸಂಬಂಧಿಸಿದ ಇತರ ಪ್ರಕ್ರಿಯೆಗಳು ಮೊದಲಿನಂತೆಯೇ ಮುಂದುವರಿಯುತ್ತವೆ.
ಟಾಟಾ ಮತ್ತು ಹುಂಡೇ ಕಾರಿನ ದರ ಏರಿಕೆ
ಟಾಟಾ ಮೋಟಾರ್ಸ್ ಇಂದಿನಿಂದ ತನ್ನ ಎಲ್ಲಾ ಕಾರು ಮಾದರಿಗಳು ಮತ್ತು ವೇರಿಯಂಟ್‌ಗಳ ಬೆಲೆಗಳನ್ನು ₹25,000 ವರೆಗೆ ಹೆಚ್ಚಿಸಿದೆ. ಹುಂಡೇ ಮೋಟಾರ್ ಇಂಡಿಯಾ ಕೂಡ ಬೆಲೆಗಳನ್ನು ಶೇ1ರಷ್ಟು ಹೆಚ್ಚಿಸಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕಾರ್ಯಾಚರಣೆಯ ವೆಚ್ಚಗಳು ಮತ್ತು ಹಣದುಬ್ಬರದ ಒತ್ತಡವನ್ನು ಸರಿದೂಗಿಸಲು ಕಂಪನಿಗಳು ಈ ನಿರ್ಧಾರ ತೆಗೆದುಕೊಂಡಿವೆ.
ಹೀಗಾಗಿ ಸೆಪ್ಟೆಂಬರ್‌ನಿಂದ ಹೊಸ ಟಾಟಾ ಅಥವಾ ಹುಂಡೇ ಕಾರು ಅಥವಾ ಎಸ್‌ಯುವಿ ಖರೀದಿಸುವ ಗ್ರಾಹಕರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಬೆಲೆ ಏರಿಕೆಯ ನಿಖರ ಮೊತ್ತವು ಮಾದರಿ ಮತ್ತು ವೇರಿಯಂಟ್ ಅನ್ನು ಅವಲಂಬಿಸಿರುತ್ತದೆ.

