ಕೀವ್ : ರಾಜಧಾನಿ ಕೀವ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ರಷ್ಯಾ ಪಡೆಗಳು ನಡೆಸಿದ ಕ್ಷಿಪಣಿ ಹಾಗೂ ಡ್ರೋನ್ ದಾಳಿಯಲ್ಲಿ 12 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನ ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರ ಪೈಕಿ ಒಬ್ಬ ಭಾರತೀಯ ಪ್ರಜೆಯೂ ಸೇರಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮಂಗಳವಾರ ದೃಢಪಡಿಸಿದ್ದಾರೆ.
ಕೀವ್ ನಗರದ ರೈಲ್ವೆ ಡಿಪೋವೊಂದರ ಮೇಲೆ ರಷ್ಯಾದ ಬ್ಯಾಲಿಸ್ಟಿಕ್ ಕ್ಷಿಪಣಿ ಅಪ್ಪಳಿಸಿದ ಪರಿಣಾಮ, 8 ಮಂದಿ ಮೃತಪಟ್ಟಿದ್ದಾರೆ. ಅವರಲ್ಲಿ 6 ಆರು ಮಂದಿ ರೈಲ್ವೆಯ ಉದ್ಯೋಗಿಗಳಾಗಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಲೆಕ್ಸಾಂಡರ್ ಪೆರ್ಟ್ಸೊವ್ಸ್ಕಿ ಹೇಳಿದ್ದಾರೆ.
ಬೋರಿಸ್ಪಿಲ್‌ನಲ್ಲಿ ವಸತಿ ಸಮುಚ್ಚಯಕ್ಕೆ ಹಾನಿ
ಕೀವ್ ಉಪನಗರವಾದ 'ಬೋರಿಸ್ಪಿಲ್'ನಲ್ಲಿ ವಸತಿ ಕಟ್ಟಡವೊಂದಕ್ಕೆ ಹಾನಿಯಾಗಿದ್ದು, ಅಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಕಟ್ಟಡದಿಂದ ಸುಮಾರು 50 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ, ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೆಚ್ಚಿನ ಪ್ರಾಣಹಾನಿ ಉಂಟುಮಾಡುವುದು ರಷ್ಯಾದ ಮುಖ್ಯ ಉದ್ದೇಶ ಎಂದು ಕಿಡಿಕಾರಿದ್ದಾರೆ.
ಈ ದಾಳಿಯನ್ನು ಸಮರ್ಥಿಸಿಕೊಂಡಿರುವ ರಷ್ಯಾದ ರಕ್ಷಣಾ ಸಚಿವಾಲಯ, ತಾನು ಕೀವ್ ಹಾಗೂ ಒಡೆಸ್ಸಾ ಬಂದರು ಪ್ರದೇಶಗಳಲ್ಲಿರುವ ಉಕ್ರೇನ್‌ನ ಸೇನಾ- ಕೈಗಾರಿಕಾ ಸಂಕೀರ್ಣಗಳು ಮತ್ತು ಇಂಧನ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡು ಬೃಹತ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ.
ಕಳೆದ ಕೆಲವು ವಾರಗಳಿಂದ ಕೀವ್ ನಗರದ ಮೇಲೆ ರಷ್ಯಾ ಡ್ರೋನ್‌ಗಳು ಹಾಗೂ ಕ್ಷಿಪಣಿಗಳ ಮೂಲಕ ನಿರಂತರವಾಗಿ ದಾಳಿ ನಡೆಸುತ್ತಿದ್ದು, ದಿನಕ್ಕೆ ಹತ್ತಕ್ಕೂ ಹೆಚ್ಚು ಬಾರಿ ವಾಯುದಾಳಿಯ ಮುನ್ನೆಚ್ಚರಿಕೆ ಸೈರನ್‌ಗಳು ಮೊಳಗುತ್ತಿವೆ.

