ಕಾಸರಗೋಡು: 2017ರಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆದ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ಫಲಾನುಭವಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ 350 ಮಂದಿಗೆ ತಲಾ 5 ಲಕ್ಷ ರೂ.ಗಳ ಆರ್ಥಿಕ ನೆರವು ನೀಡಲಾಗಿದ್ದು, ಇದುವರೆಗೆ ಒಟ್ಟು 17 ಕೋಟಿ 50 ಲಕ್ಷ ರೂ.ಗಳನ್ನು ವಿತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ. ಈ ಪಟ್ಟಿಯಲ್ಲಿ ಒಟ್ಟು 977 ಮಂದಿ ಸೇರ್ಪಡೆಗೊಂಡಿದ್ದಾರೆ. ಜೊತೆಗೆ, 201 ಅರ್ಜಿಗಳಿಗೆ ಆರ್ಥಿಕ ನೆರವು ನೀಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. 2017ರಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿದ್ದ ಹಾಗೂ ಬಾಧಿತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದ 432 ಮಂದಿ ಇನ್ನೂ ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸಬೇಕಾಗಿದೆ. ಇವರಿಗೆ ಆರ್ಥಿಕ ನೆರವು ನೀಡುವ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ.
ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಗೆ ಹೆಚ್ಚಿನ ವ್ಯಕ್ತಿಗಳನ್ನು ಸೇರ್ಪಡೆಗೊಳಿಸಲು 2022ರಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು, ಮತ್ತು ವಿವಿಧ ಹಂತಗಳಲ್ಲಿ ಶಿಬಿರಗಳನ್ನು ಆಯೋಜಿಸಲಾಗಿತ್ತು. 2022ರಲ್ಲಿ ಆಹ್ವಾನಿಸಲಾದ ಅರ್ಜಿಗಳ ಆಧಾರದಲ್ಲಿ ಬಾಧಿತರಾದವರ ಪಟ್ಟಿಯನ್ನು ಸದ್ಯ ಸಿದ್ಧಪಡಿಸಲಾಗುತ್ತಿದೆ.
2017ರಲ್ಲಿ ಪರಿಹಾರ ಶಿಬಿರಗಳಲ್ಲಿ ಉಳಿದುಕೊಂಡಿದ್ದ ಮತ್ತು ಬಾಧಿತರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೂ, ಇಲ್ಲಿಯವರೆಗೆ ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸದ ವ್ಯಕ್ತಿಗಳು www.landrevenue.kerala.gov.in ವೆಬ್ಸೈಟ್ ಮೂಲಕ ಹಾಗೂ ಅಕ್ಷಯ ಕೇಂದ್ರಗಳ ಮೂಲಕ ತಮ್ಮ ಅರ್ಜಿ ಸಲ್ಲಿಸಬೇಕು. ಅಗತ್ಯವಿರುವ ದಾಖಲೆಗಳಲ್ಲಿ ಓ.ಪಿ ಸಂಖ್ಯೆ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ನ ಪ್ರತಿ ಮತ್ತು ಪಡಿತರ ಚೀಟಿ ಸೇರಿವೆ. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 257330)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


