ನವದೆಹಲಿ: ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಅಃಈಅ) 18 ಸದಸ್ಯರ ಸಮಿತಿಯನ್ನು ಹೊಸದಾಗಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಭಾರತೀಯ ಚಲನಚಿತ್ರ, ದೂರದರ್ಶನ, ಸಂಗೀತ, ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರಗಳ ಪ್ರಮುಖ ಹಾಗೂ ಜನಪ್ರಿಯ ವ್ಯಕ್ತಿಗಳು ಸೇರಿದ್ದಾರೆ. ಮೂರು ವರ್ಷಗಳ ಅವಧಿಗೆ ನೇಮಕಗೊಂಡವರಲ್ಲಿ ಪ್ರೀತಿ ಝಿಂಟಾ, ಸುನೀಲ್ ಶೆಟ್ಟಿ, ಪಂಕಜ್ ತ್ರಿಪಾಠಿ, ಮನೋಜ್ ಜೋಶಿ, ಪ್ರೊಸೆನ್‌ಜಿತ್ ಚಟರ್ಜಿ, ಪಲ್ಲವಿ ಜೋಶಿ ಮತ್ತು ರೂಪಾಲಿ ಗಂಗೂಲಿ ಮೊದಲಾದವರಿದ್ದಾರೆ.
ಮಾತ್ರವಲ್ಲದೆ, ಚಲನಚಿತ್ರ ನಿರ್ಮಾಪಕ ಪ್ರಿಯದರ್ಶನ್, ಸಂಗೀತಗಾರ ರಿಕಿ ಕೇಜ್, ವಿಮರ್ಶಕ ವಿನೋದ್ ಅನುಪಮ್ ಮತ್ತು ಅನೇಕ ಬರಹಗಾರರು ಸಮತಿಯಲ್ಲಿದ್ದಾರೆ.
ಈ 18 ಮಂದಿ ಯಾರು ಮತ್ತು ಅವರು ಭಾರತೀಯ ಮನರಂಜನಾ ಉದ್ಯಮಕ್ಕೆ ನೀಡಿರುವ ಕೊಡುಗೆಗಳೇನು? ಹೊಸ ಸಮಿತಿಗೆ ಸೇರ್ಪಡೆಗೊಂಡಿರುವ ವ್ಯಕ್ತಿಗಳ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ:
ವಿನೋದ್ ಅನುಪಮ್:
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ವಿಮರ್ಶಕರಾದ ವಿನೋದ್ ಅನುಪಮ್ ತಾರೆಯರು ಮತ್ತು ಬಾಕ್ಸ್ ಆಫೀಸ್ ಗಳಿಕೆಗೂ ಆಚೆಗೆ ಭಾರತೀಯ ಚಲನಚಿತ್ರಗಳನ್ನು ಆಳವಾಗಿ ಗಮನಿಸುತ್ತಾ ಬಂದಿದ್ದಾರೆ. ಚಲನಚಿತ್ರಗಳು, ಸಂಸ್ಕೃತಿ ಮತ್ತು ಸಮಾಜವನ್ನು ವಿಶ್ಲೇಷಿಸುವ ಅವರ ಬರಹಗಳು ಸಮಿತಿಗೆ ಒಬ್ಬ ವಿಮರ್ಶಕನ ದೃಷ್ಟಿಕೋನ ಒದಗಿಸಬಹುದು.
ಮನೋಜ್ ಜೋಶಿ:
'ಹಂಗಾಮಾ', 'ಭೂಲ್ ಭುಲೈಯಾ' ಮತ್ತು 'ಫಿರ್ ಹೇರಾ ಫೇರಿ' ಸಿನಿಮಾಗಳಲ್ಲಿ ಹಿರಿಯ ಪೋಷಕ ನಟರಾಗಿ ಪರಿಚಿತರು. ರಂಗಭೂಮಿಯ ಮೂಲಕ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ನಂತರ ಹಿಂದಿ, ಮರಾಠಿ ಮತ್ತು ಗುಜರಾತಿ ಮನರಂಜನಾ ಕ್ಷೇತ್ರಗಳಲ್ಲಿ ಜನಪ್ರಿಯ ಮುಖವಾಗಿ ಗುರುತಿಸಿಕೊಂಡಿದ್ದಾರೆ.
ಅಭಿಷೇಕ್ ಜೈನ್:
'ಕೇವಿ ರೈಟ್ ಜೈಶ್' ಮತ್ತು 'ಬೇ ಯಾರ್' ಮೊದಲಾದ ಚಿತ್ರಗಳ ಮೂಲಕ ಗುಜರಾತಿ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ. 'ಹಮ್ ದೋ ಹಮಾರೆ ದೋ' ನಿರ್ದೇಶನದ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪನೆ ಮಾಡಿದವರು.
ರಿಕಿ ಕೇಜ್:
ಸಂಗೀತ ಜಗತ್ತಿನಲ್ಲಿ ಹೆಸರು ಮಾಡಿದವರು. ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತರು. ವಿಂಡ್ಸ್ ಆಫ್ ಸಂಸಾರ ಮತ್ತು ಡಿವೈನ್ ಟೈಡ್ಸ್ ನಂತಹ ಅವರ ಅಲ್ಬಂಗಳು ಜನ ಮೆಚ್ಚುಗೆ ಪಡೆದಿದ್ದು, ಭಾರತೀಯ ಧ್ವನಿಗಳನ್ನು ಅಂತರರಾಷ್ಟ್ರೀಯ ಪ್ರೇಕ್ಷಕರಿಗೆ ಕೊಂಡೊಯ್ದಿದ್ದಾರೆ.
ಪ್ರಿಯದರ್ಶನ್:
ಚಲನಚಿತ್ರ ನಿರ್ದೇಶಕ ಪ್ರಿಯದರ್ಶನ್ 'ಹೇರಾ ಫೇರಿ', 'ಹಂಗಾಮಾ', 'ಗರಂ ಮಸಾಲಾ' ಮತ್ತು 'ಭೂಲ್ ಭುಲೈಯಾ' ಸೇರಿದಂತೆ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ಸುನೀಲ್ ಶೆಟ್ಟಿ:
ಆಕ್ಷನ್-ಪ್ಯಾಕ್ಡ್ 'ಮೊಹ್ರಾ' ಮತ್ತು 'ಬಾರ್ಡರ್'ನಿಂದ ತೊಡಗಿ 'ಧಡ್ಕನ್' ಮತ್ತು 'ಹೇರಾ ಫೇರಿ'ವರೆಗೆ ಸುನೀಲ್ ಶೆಟ್ಟಿ ಆಕ್ಷನ್, ಪ್ರಣಯ, ನಾಟಕ ಮತ್ತು ಹಾಸ್ಯ ಸಿನಿಮಾಗಳೊಂದಿಗೆ ದೀರ್ಘ ವೃತ್ತಿಜೀವನ ಹೊಂದಿದ್ದಾರೆ.
ಹಂಸರಾಜ್ ಹನ್ಸ್:
ಪಂಜಾಬಿ ಜನಪದ ಮತ್ತು ಸೂಫಿ ಸಂಗೀತದಲ್ಲಿ ದಶಕಗಳ ಅನುಭವವನ್ನು ಹೊಂದಿದ್ದಾರೆ. ಭಕ್ತಿ ಮತ್ತು ಪಂಜಾಬಿ ಸಂಗೀತದಿಂದ ಚಲನಚಿತ್ರ ಗೀತೆಗಳವರೆಗೆ ಅವಸರ ಸಂಗೀತ ಸಂಗ್ರಹ ವಿಸ್ತರಿಸಿದೆ. ಅವರು 'ತೇರೆ ಇಷ್ಕ್ ನಚಾಯಾ', 'ನಿತ್ ಖೈರ್ ಮಂಗಾ' ಮತ್ತು 'ಮೇರೆ ನೈನಾ ವಿಚ್' ಮೊದಲಾದ ಹಾಡುಗಳಿಗೆ ಜನಪ್ರಿಯರಾಗಿದ್ದಾರೆ.
ಸುಪ್ರಿಯಾ ಯಾರ್ಲಗಡ್ಡ:
ಸುಪ್ರಿಯಾ ಯಾರ್ಲಗಡ್ಡ ಅವರು 'ಅಕ್ಕಡ ಅಮ್ಮಾಯಿ ಇಕ್ಕಡ ಅಬ್ಬಾಯಿ' ಮೂಲಕ ನಟನೆಗೆ ಪದಾರ್ಪಣೆ ಮಾಡಿದವರು. ನಂತರ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡಿ ತೆಲುಗು ಚಿತ್ರರಂಗದಲ್ಲಿ ಹೆಸರುವಾಸಿಯಾಗಿದ್ದಾರೆ.
ಯತೀಂದ್ರ ಮಿಶ್ರಾ:
ಕವಿ, ಬರಹಗಾರ ಮತ್ತು ಸಂಗೀತ ವಿದ್ವಾಂಸ. ಲತಾ ಮಂಗೇಶ್ಕರ್ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಜೀವನ ಮತ್ತು ಕೆಲಸದ ಬಗ್ಗೆ ಪುಸ್ತಕಗಳನ್ನು ಬರೆದಿದ್ದಾರೆ.
ರೂಪಾಲಿ ಗಂಗೂಲಿ:
ಟಿವಿ ವೀಕ್ಷಕರಿಗೆ ಚಿರಪರಿಚಿತ ಹೆಸರು. ಸಾರಾಭಾಯ್ ವರ್ಸಸ್ ಸಾರಾಭಾಯ್ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 'ಅನುಪಮಾ' ಧಾರವಾಹಿ ಮೂಲಕವೂ ಪ್ರಸಿದ್ಧಿ ಪಡೆದಿದ್ದಾರೆ.
ಪ್ರೀತಿ ಝಿಂಟಾ:
'ದಿಲ್ ಸೇ', 'ಕ್ಯಾ ಕೆಹ್ನಾ', 'ಕಲ್ ಹೋ ನಾ ಹೋ' ಮತ್ತು 'ವೀರ್-ಝಾರಾ' ಮೊದಲಾದ ಸಿನಿಮಾಗಳೊಂದಿಗೆ 2000 ರ ದಶಖದ ಬಾಲಿವುಡ್ನ ಪ್ರಮುಖ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ನಟನೆ ಮೀರಿ ನಿರ್ಮಾಣ ಮತ್ತು ಕ್ರೀಡೆಗಳಿಗೂ ಅವರ ವೃತ್ತಿಜೀವನ ವಿಸ್ತರಿಸಿದೆ.
ನೀಲಾ ಮಾಧಬ್ ಪಾಂಡಾ:
ನೀಲಾ ಮಾಧಬ್ ಪಾಂಡಾ ಅವರು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕಿ, ಸಾಮಾಜಿಕ ಮತ್ತು ಪರಿಸರ ಕಾಳಜಿಗಳನ್ನು ತೊಡಗಿಸಿಕೊಳ್ಳುವ ಕತೆಗಳಿಗೆ ಹೆಸರುವಾಸಿಯಾಗಿದ್ದಾರೆ. 'ಜಲಪರಿ: ದಿ ಡೆಸರ್ಟ್ ಮೆರ್ಮೇಯ್ಡ್' ಮತ್ತು 'ಕಡ್ವಿ ಹವಾ' ಚಲನಚಿತ್ರಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ.
ಪಂಕಜ್ ತ್ರಿಪಾಠಿ:
'ಗ್ಯಾಂಗ್ಸ್ ಆಫ್ ವಾಸೇಪುರ್', 'ಮಸಾನ್', 'ಮಿರ್ಜಾಪುರ್' ಮತ್ತು 'ಸ್ತ್ರೀ'ವರೆಗೆ ಪಂಕಜ್ ತ್ರಿಪಾಠಿ ಅವರು ಸಣ್ಣ ಪಾತ್ರಗಳನ್ನು ಸಹ ಸ್ಮರಣೀಯವಾಗಿಸುವ ಖ್ಯಾತಿ ಗಳಿಸಿದ್ದಾರೆ.
ಪ್ರೊಸೆನ್ಜಿತ್ ಚಟರ್ಜಿ:
ಬಂಗಾಳಿ ಚಿತ್ರರಂಗದ ಅತಿದೊಡ್ಡ ತಾರೆಗಳಲ್ಲಿ ಒಬ್ಬರಾದ ಪ್ರೊಸೆನ್ಜಿತ್ ಚಟರ್ಜಿ ಚೋಖೇರ್ ಬಾಲಿ, ಅಟೋಗ್ರಾಫ್ ಮತ್ತು ಪ್ರಾಕ್ತನ್ಗೆ ಹೆಸರಾಗಿದ್ದಾರೆ.
ಪಲ್ಲವಿ ಜೋಶಿ:
ದೂರದರ್ಶನ ಮತ್ತು ಚಲನಚಿತ್ರಗಳ ನಡುವೆ ಅನೇಕ ದಶಕಗಳನ್ನು ಕಳೆದಿದ್ದಾರೆ. 'ದಿ ತಾಷ್ಕೆಂಟ್ ಫೈಲ್ಸ್' ಮತ್ತು 'ದಿ ಕಾಶ್ಮೀರ್ ಫೈಲ್ಸ್' ಮೊದಲಾದ ಸಿನಿಮಾಗಳಿಗೆ ಹೆಸರುವಾಸಿ.
ನಿಶಿಗಂಧ ವಾಡ್:
'ಸರ್ಜಾ', 'ನಿವದುಂಗ್' ಮತ್ತು 'ತುಜಿ ಮಾಜ್ಹಿ ಜಮ್ಲಿ' ಜೋಡಿ ಮೊದಲಾದ ಚಲನಚಿತ್ರಗಳಿಗೆ ಹೆಸರುವಾಸಿಯಾದ ಜನಪ್ರಿಯ ಮರಾಠಿ ನಟಿ. ದೂರದರ್ಶನದಲ್ಲೂ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ.
ವಾಮನ್ ಕೇಂದ್ರೆ:
ರಾಷ್ಟ್ರೀಯ ನಾಟಕ ಶಾಲೆ ಜೊತೆಗೆ ಸಂಬಂಧಕ್ಕೆ ಪ್ರಸಿದ್ಧಿ ಪಡೆದಿರುವ ವಾಮನ್, ರಂಗಭೂಮಿ ತರಬೇತಿಯಲ್ಲಿ ದಶಕಗಳ ಕಾಲ ಕೆಲಸ ಮಾಡಿದ್ದಾರೆ.
ರಮೇಶ್ ಪತಂಗೆ:
ಲೇಖಕ, ಸಂಪಾದಕ ಮತ್ತು ಸಾಮಾಜಿಕ ವಿಮರ್ಶಕ ರಮೇಶ್ ಪತಂಗೆ ಅವರ ಕೃತಿಗಳು ಸಮಾಜ, ಸಂಸ್ಕೃತಿ ಮತ್ತು ಸಾಮಾಜಿಕ ಸುಧಾರಣೆಯನ್ನು ಪರಿಶೋಧಿಸುತ್ತವೆ. ಡಾ. ಬಿ.ಆರ್. ಅಂಬೇಡ್ಕರ್, ಸಾಂವಿಧಾನಿಕ ಮೌಲ್ಯಗಳು ಮತ್ತು ಸಾಮಾಜಿಕ ಸಾಮರಸ್ಯ ಸೇರಿದಂತೆ ವಿಷಯಗಳನ್ನು ಒಳಗೊಂಡಿರುವ ಪುಸ್ತಕಗಳನ್ನು ಬರೆದಿದ್ದಾರೆ.
ಈ ಹೊಸ ಸಮಿತಿ ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಲಿದೆ. 2006 ಮೇ ನಲ್ಲಿ ನೇಂಕಗೊಂಡಿರುವ ಶಶಿ ಶೇಖರ್ ವೆಂಪತಿ CBFC ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ.

