HEALTH TIPS

ಹಿಂದಿ ಕುರಿತು ನಿಮ್ಮ ಮನಃಸ್ಥಿತಿಯನ್ನು ಬದಲಿಸಿಕೊಳ್ಳಿ: ತಮಿಳುನಾಡಿಗೆ ಸುಪ್ರೀಂ ಕೋರ್ಟ್ ಕಿವಿಮಾತು

ನವದೆಹಲಿ:  ತಮಿಳುನಾಡು ಸರಕಾರವು ರಾಜ್ಯದ ಶಾಲೆಗಳಲ್ಲಿ ಹಿಂದಿ ಬೋಧನೆಯ ಕುರಿತು ತನ್ನ ಮನಃಸ್ಥಿತಿಯನ್ನು ಬದಲಿಸಿಕೊಳ್ಳುವ ಅಗತ್ಯವಿದೆ. ತಮಿಳು ನೆಲದಲ್ಲಿ ಹಿಂದಿಯನ್ನು ಬೋಧಿಸುವಂತಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಗುರುವಾರ ಹೇಳಿದೆ.


ತಮಿಳುನಾಡಿನಲ್ಲಿ ನವೋದಯ ಶಾಲೆಗಳ ಸ್ಥಾಪನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಮತ್ತು ಎ.ಜಿ.ಮಸಿಹ್ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.

ಶಿಕ್ಷಣ ಸಚಿವಾಲಯದ ಅಧೀನದ ನವೋದಯ ವಿದ್ಯಾಲಯ ಸಮಿತಿಯು ನಡೆಸುತ್ತಿರುವ ಕೇಂದ್ರ ಸರಕಾರದಿಂದ ಅನುದಾನಿತ ನವೋದಯ ಶಾಲೆಗಳು ಹಿಂದಿ ಸೇರಿದಂತೆ ತ್ರಿಭಾಷಾ ನೀತಿಯನ್ನು ಅನುಸರಿಸುತ್ತವೆ.

ಆದರೆ ಇದು ತಮಿಳುನಾಡಿನ ದ್ವಿಭಾಷಾ ನೀತಿಗೆ ವಿರುದ್ಧವಾಗಿದೆ ಎಂದು ರಾಜ್ಯ ಸರಕಾರವು ವಿರೋಧಿಸುತ್ತಿದೆ.

ಪ್ರತಿ ಜಿಲ್ಲೆಯಲ್ಲಿ ನವೋದಯ ಶಾಲೆಗಳನ್ನು ಸ್ಥಾಪಿಸುವಂತೆ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದೆ.

ನವೋದಯ ವಿದ್ಯಾಲಯಗಳು ತಮಿಳುನಾಡು ತಮಿಳು ಕಲಿಕೆ ಕಾಯ್ದೆಯನ್ನು ಉಲ್ಲಂಘಿಸಿಲ್ಲ ಮತ್ತು ಇಂತಹ ಶಾಲೆಗಳ ಸ್ಥಾಪನೆಗೆ ಸರಕಾರದ ಸಾರಾಸಗಟು ನಿರಾಕರಣೆಯು ಶಿಕ್ಷಣ ಸಂಸ್ಥೆಗಳನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳ ಹಕ್ಕನ್ನು ಮೊಟಕುಗೊಳಿಸುತ್ತದೆ ಎಂದು ಹೇಳಿದ್ದ ಮದ್ರಾಸ್ ಉಚ್ಚ ನ್ಯಾಯಾಲಯವು,ಪ್ರತಿ ಜಿಲ್ಲೆಯಲ್ಲಿ 240 ವಿದ್ಯಾರ್ಥಿಗಳಿಗಾಗಿ ತಾತ್ಕಾಲಿಕ ಸ್ಥಳಾವಕಾಶವನ್ನು ಒದಗಿಸುವಂತೆ ಸೂಚಿತ್ತು.

ಶಿಕ್ಷಣ ನೀತಿಯು ರಾಜ್ಯದ ವಿಶೇಷ ಅಧಿಕಾರ ವ್ಯಾಪ್ತಿಗೆ ಸೇರಿದೆ ಮತ್ತು ಈ ನೀತಿಯು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ತಮಿಳುನಾಡು ಪರ ಹಿರಿಯ ವಕೀಲ ಜೈದೀಪ ಗುಪ್ತಾ ಗುರುವಾರ ವಿಚಾರಣೆ ಸಂದರ್ಭದಲ್ಲಿ ವಾದಿಸಿದರು.

2025ರ ಡಿಸೆಂಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ಆರು ವಾರಗಳಲ್ಲಿ ನವೋದಯ ಶಾಲೆಗಳ ಸ್ಥಾಪನೆಗಾಗಿ ಅಗತ್ಯ ಭೂಮಿಯನ್ನು ಗುರುತಿಸುವಂತೆ ತಮಿಳುನಾಡು ಸರಕಾರಕ್ಕೆ ಆದೇಶಿಸಿತ್ತು. ಈ ಆದೇಶವನ್ನು ಹಿಂದೆಗೆದುಗೊಳ್ಳುವಂತೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿತು. ಆದರೆ, ಆದೇಶವನ್ನು ಪಾಲಿಸಲು ರಾಜ್ಯ ಸರಕಾರಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಿತು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರತಿನಿಧಿಗಳು ಶಾಲೆಗಳ ಸ್ಥಾಪನಾ ನೀತಿಯ ಕುರಿತು ಚರ್ಚೆ ನಡೆಸಬಹುದು. ಶಿಕ್ಷಣ ನೀತಿಯಂತಹ ಕೇಂದ್ರ ಸರಕಾರದ ನೀತಿಗಳನ್ನು ರಾಜ್ಯಗಳು ನಿರಾಕರಿಸಲಾಗದು ಎಂದು ತಿಳಿಸಿದ ಸರ್ವೋಚ್ಚ ನ್ಯಾಯಾಲಯವು, ತಮಿಳುನಾಡು ಸರಕಾರವು ತನ್ನ ಬಿಗುಧೋರಣೆಯನ್ನು ಸಡಿಲಿಸಬೇಕು ಎಂದು ತಾಕೀತು ಮಾಡಿದೆ.

ಅಂತಿಮವಾಗಿ ಸಹಕಾರಿ ಒಕ್ಕೂಟ ವ್ಯವಸ್ಥೆಯಡಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಡಿಸೆಂಬರ್ 14 ಕ್ಕೆ ನಿಗದಿಪಡಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries