ನವದೆಹಲಿ: ಜೈಲಿನಲ್ಲಿರುವ ಕಾರ್ಯಕರ್ತ ಉಮರ್ ಖಾಲಿದ್ ಅವರನ್ನು ಕುರಿತ ಸಾಕ್ಷ್ಯಚಿತ್ರವನ್ನು IIIT-ಹೈದರಾಬಾದ್ ನಲ್ಲಿ ಪ್ರದರ್ಶಿಸಲು ಉದ್ದೇಶಿಸಿರುವುದಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಗುರುವಾರ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
CBFCಯಿಂದ ಪ್ರಮಾಣೀಕರಿಸದ ಚಲನಚಿತ್ರವನ್ನು ನಿರ್ದಿಷ್ಟ ವಿನಾಯಿತಿ ಪಡೆಯದೆ ಸಾರ್ವಜನಿಕವಾಗಿ ಪ್ರದರ್ಶಿಸುವುದು 'ಸಿನೆಮಾಟೋಗ್ರಾಫ್ ಕಾಯ್ದೆ'ಯ ಉಲ್ಲಂಘನೆಯಾಗುತ್ತದೆ ಎಂದು ಮಂಡಳಿ ಹೇಳಿದೆ.
ಚಲನಚಿತ್ರ ನಿರ್ಮಾಪಕ ಲಲಿತ್ ವಚಾನಿ ನಿರ್ದೇಶಿಸಿರುವ 'Prisoner No. 626710 is Present' (ಖೈದಿ ಸಂಖ್ಯೆ 626710 ಹಾಜರಿದ್ದಾರೆ) ಎಂಬ ಸಾಕ್ಷ್ಯಚಿತ್ರವನ್ನು ಶುಕ್ರವಾರ ರಾತ್ರಿ 8 ಗಂಟೆಗೆ IIIT-ಹೈದರಾಬಾದ್ನ KRB ಸಭಾಂಗಣದಲ್ಲಿ ವಿದ್ಯಾರ್ಥಿಗಳ ಗುಂಪೊಂದು ಪ್ರದರ್ಶಿಸಲು ಉದ್ದೇಶಿಸಿತ್ತು. ಆದರೆ, CBFC ಆಕ್ಷೇಪ ವ್ಯಕ್ತಪಡಿಸಿದ ಬಳಿಕ ವಿದ್ಯಾರ್ಥಿಗಳು ಪ್ರದರ್ಶನ ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
"CBFCಯಿಂದ ಇನ್ನೂ ಪ್ರಮಾಣೀಕರಿಸಲ್ಪಡದ ಸಾಕ್ಷ್ಯಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸುವುದು ಸಿನೆಮಾಟೋಗ್ರಾಫ್ ಕಾಯ್ದೆಯ ಉಲ್ಲಂಘನೆಯಾಗಿದೆ. ಕಾಯ್ದೆಯಡಿ ನಿರ್ದಿಷ್ಟ ವಿನಾಯಿತಿಯನ್ನು ಕೋರಿ ಪಡೆಯದ ಹೊರತು ಇದು ಸಾಧ್ಯವಿಲ್ಲ" ಎಂದು CBFC 'X'ನಲ್ಲಿ ಪೋಸ್ಟ್ ಮಾಡಿದೆ.
IIIT-ಹೈದರಾಬಾದ್ ಅನ್ನು ಟ್ಯಾಗ್ ಮಾಡಿರುವ CBFC, "ಅಗತ್ಯ ಕ್ರಮಕ್ಕಾಗಿ ಇದನ್ನು ಗಮನಿಸಬಹುದು" ಎಂದು ಹೇಳಿದೆ.
CBFC ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ IIIT-ಹೈದರಾಬಾದ್ ಗೆ ಕಳುಹಿಸಲಾದ ಇಮೇಲ್ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
►ಬೆಂಗಳೂರಿನ NLSIUನಲ್ಲೂ ಪ್ರದರ್ಶನ ಮುಂದೂಡಿಕೆ
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ (NLSIU)ಯಲ್ಲೂ ಇದೇ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲು ಉದ್ದೇಶಿಸಲಾಗಿತ್ತು. ಆದರೆ, RSS ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
'ರಾಜಕೀಯ ಕೈದಿಗಳ ದಿನ' ಮತ್ತು ಉಮರ್ ಖಾಲಿದ್ ಬಂಧನವಾಗಿ ಆರು ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳೇ ನಿರ್ವಹಿಸುವ 'ಲಾ ಅಂಡ್ ಸೊಸೈಟಿ ಕಮಿಟಿ'ಯು ಸೆಪ್ಟೆಂಬರ್ 14ರಂದು NLSIUನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಆಯೋಜಿಸಿತ್ತು.
ಕ್ಯಾಂಪಸ್ ನಲ್ಲಿ ಇಂತಹ ಪ್ರದರ್ಶನಕ್ಕೆ ಅವಕಾಶ ನೀಡುವುದರಿಂದ ಅದನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಂಡಂತಾಗುತ್ತದೆ ಎಂದು ಆರೋಪಿಸಿದ್ದ ABVP, ಕಾರ್ಯಕ್ರಮ ರದ್ದುಗೊಳಿಸುವಂತೆ ಆಗ್ರಹಿಸಿತ್ತು.
ಬಳಿಕ ವಿದ್ಯಾರ್ಥಿ ಸಮಿತಿಯು "ಆಡಳಿತಾತ್ಮಕ ಮತ್ತು ಭದ್ರತಾ ಕಾರಣಗಳನ್ನು" ಉಲ್ಲೇಖಿಸಿ ಕಾರ್ಯಕ್ರಮವನ್ನು ಮುಂದೂಡಿತ್ತು. ಆದರೆ, ಯಾವುದೇ ಒತ್ತಡಕ್ಕೆ ಮಣಿದು ಕಾರ್ಯಕ್ರಮದಿಂದ ಹಿಂದೆ ಸರಿದಿಲ್ಲ ಎಂದು ಸಮಿತಿ ಸ್ಪಷ್ಟಪಡಿಸಿತ್ತು. ತ್ರೈಮಾಸಿಕ ಅವಧಿಯ (trimester) ಬಳಿಕದ ದಿನಗಳಲ್ಲಿ ಪ್ರದರ್ಶನ ನಡೆಸಲಾಗುವುದು ಎಂದೂ ತಿಳಿಸಿತ್ತು.
'Prisoner No. 626710 is Present' ಸಾಕ್ಷ್ಯಚಿತ್ರವು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU) ಮಾಜಿ ಸಂಶೋಧನಾ ವಿದ್ವಾಂಸ ಉಮರ್ ಖಾಲಿದ್ ಅವರನ್ನು ಕೇಂದ್ರವಾಗಿರಿಸಿಕೊಂಡಿದೆ.
ಈಶಾನ್ಯ ದಿಲ್ಲಿ ಗಲಭೆಗಳ ಹಿಂದಿನ ದೊಡ್ಡ ಪಿತೂರಿಯ ಆರೋಪದ ಮೇಲೆ ಖಾಲಿದ್ ಅವರನ್ನು ಸೆಪ್ಟೆಂಬರ್ 2020ರಲ್ಲಿ ಬಂಧಿಸಲಾಗಿತ್ತು. ಅವರ ವಿರುದ್ಧ 'ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ' (UAPA) ಹಾಗೂ ಇತರ ನಿಬಂಧನೆಗಳ ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ. ಇದುವರೆಗೂ ಅವರ ವಿಚಾರಣೆ ನಡೆದಿಲ್ಲ.
IIIT-ಹೈದರಾಬಾದ್ ನಲ್ಲಿ ಉದ್ದೇಶಿಸಲಾಗಿದ್ದ ಪ್ರದರ್ಶನದ ಆಹ್ವಾನ ಪತ್ರಿಕೆಯಲ್ಲಿ, ಕಾರ್ಯಕ್ರಮವನ್ನು 'ರಾಜಕೀಯ ಕೈದಿಗಳ ದಿನ'ದ ಅಂಗವಾಗಿ ಆಯೋಜಿಸಲಾಗಿದೆ ಎಂದು ತಿಳಿಸಲಾಗಿತ್ತು.
ಅಲ್ಲದೆ, ಕ್ರಾಂತಿಕಾರಿ ಜತೀಂದ್ರ ನಾಥ್ ದಾಸ್ ಅವರ ಪುಣ್ಯತಿಥಿಯನ್ನೂ ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿತ್ತು. ಭಗತ್ ಸಿಂಗ್ ಅವರ ಸಹಚರರಾಗಿದ್ದ ದಾಸ್ ಅವರು 1929ರಲ್ಲಿ ಲಾಹೋರ್ ಜೈಲಿನಲ್ಲಿ ದೀರ್ಘಕಾಲದ ಉಪವಾಸ ಸತ್ಯಾಗ್ರಹ ನಡೆಸಿದ ಬಳಿಕ ಮೃತಪಟ್ಟಿದ್ದರು.

