ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) 2026ರ ಡಿಸೆಂಬರ್‌ನಿಂದ 2027ರ ಮಾರ್ಚ್‌ವರೆಗಿನ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ.
ಈ ಅವಧಿಯಲ್ಲಿ ಒಟ್ಟು 14 ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ಎನ್‌ಎಟಿಎ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ 'ಜೆಇಇ-ಮೇನ್'ನ ಮೊದಲ ಆವೃತ್ತಿಯನ್ನು 2027ರ ಜನವರಿ 22-24 ಮತ್ತು ಜನವರಿ 28-30ರವರೆಗೆ ಪ್ರಸ್ತಾಪಿಸಲಾಗಿದೆ. ಜನವರಿ 31 ಅನ್ನು ಕಾಯ್ದಿರಿಸಿದ ದಿನವಾಗಿ ನಿಗದಿಪಡಿಸಲಾಗಿದೆ.
ಯುಜಿಸಿ-ಎನ್‌ಇಟಿ ಅನ್ನು ಡಿಸೆಂಬರ್ 14-19ರವರೆಗೆ (ಡಿ. 20-21 ಮೀಸಲು ದಿನ) ನಡೆಸಲು ಹಾಗೂ ಸಿಎಸ್‌ಐಆರ್ ಯುಜಿಸಿ-ಎನ್‌ಇಟಿ ಅನ್ನು ಡಿ. 20-21ರಂದು ನಡೆಸಲು ಎನ್‌ಟಿಎ ಪ್ರಸ್ತಾಪಿಸಿದೆ.
ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಪ್ರವೇಶಕ್ಕಾಗಿ 'ಕಾಮನ್ ಮ್ಯಾನೇಜ್‌ಮೆಂಟ್ ಅಡ್ಮಿಷನ್ ಟೆಸ್ಟ್' (ಸಿಎಂಎಟಿ) ಅನ್ನು 2027ರ ಫೆಬ್ರುವರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.
ವಿಶ್ವವಿದ್ಯಾಲಯಗಳಲ್ಲಿನ ಸ್ನಾತಕೋತ್ತರ ಪದವಿ (ಪಿ.ಜಿ) ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ 'ಸಿಯುಇಟಿ-ಪಿಜಿ' ಅನ್ನು 2027ರ ಮಾರ್ಚ್ 1-5, 8, 12-20 ಮತ್ತು 24-25ರಂದು ನಡೆಸಲು ಯೋಜಿಸಲಾಗಿದೆ. ಮಾರ್ಚ್ 30-31 ಅನ್ನು ಮೀಸಲು ದಿನವಾಗಿ ಇರಿಸಲಾಗಿದೆ.
ಈ ಪರೀಕ್ಷೆಗಳೇ ಅಲ್ಲದೆ ಈ ಅವಧಿಯಲ್ಲಿ ನ್ಯಾಷನಲ್ ಇನಿಶಿಯೇಟಿವ್ ಫಾರ್ ಟೆಕ್ನಿಕಲ್ ಟೀಚರ್ಸ್ ಟ್ರೈನಿಂಗ್ (ಎನ್‌ಐಟಿಟಿಟಿ) ಭಾಗ 1 ಮತ್ತು ಭಾಗ 2, ಆರ್ಮಿ ಕೆಡೆಟ್ಸ್ ಕಾಲೇಜು ಪರೀಕ್ಷೆ, ಎನ್‌ಐಎಫ್‌ಟಿ ಪ್ರವೇಶ ಪರೀಕ್ಷೆ, ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು ಪರೀಕ್ಷೆ, ರಾಷ್ಟ್ರೀಯ ಮಿಲಿಟರಿ ಶಾಲಾ ಪರೀಕ್ಷೆ, ಸ್ವಯಂ ಪರೀಕ್ಷೆ ಮತ್ತು ಅಖಿಲ ಭಾರತ ಸೈನಿಕ್ ಸ್ಕೂಲ್‌ಗಳ ಪ್ರವೇಶ ಪರೀಕ್ಷೆಯನ್ನು ನಡೆಸಲು ಎನ್‌ಟಿಎ ನಿರ್ಧರಿಸಿದೆ.
ಈ ಪ್ರಸ್ತಾವಿತ ವೇಳಾಪಟ್ಟಿಗಳು ತಾತ್ಕಾಲಿಕವಾಗಿವೆ. ಆಡಳಿತಾತ್ಮಕ, ಶೈಕ್ಷಣಿಕ ಮತ್ತು ಇತರ ಅನಿರೀಕ್ಷಿತ ಕಾರಣಗಳಿಂದ ಇವು ಬದಲಾವಣೆಗೆ ಒಳಪಡಬಹುದು ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

