ಕಠ್ಮಂಡು (PTI): ಸೆಪ್ಟೆಂಬರ್ 24ರಿಂದ 28ರವರೆಗೆ ನೇಪಾಳದಲ್ಲಿ ಸುರಿದ ಭಾರಿ ಮಳೆಯಿಂದ ಸಂಭವಿಸಿದ ದುರ್ಘಟನೆಗಳಲ್ಲಿ ಈವರೆಗೆ 27 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ಹೇಳಿದ್ದಾರೆ.
ಇದೇ ಅವಧಿಯಲ್ಲಿ ಮಳೆ ಅವಘಡಗಳಿಂದ ಇನ್ನೂ ನಾಲ್ಕು ಮಂದಿ ನಾಪತ್ತೆಯಾಗಿದ್ದಾರೆ.
ಜತೆಗೆ 8 ಮಂದಿ ಗಾಯಗೊಂಡಿದ್ದಾರೆ ಎಂದೂ ತಿಳಿಸಿದ್ದಾರೆ.
ಭೂ ಕುಸಿತಕ್ಕೆ ಸಂಬಂಧಿಸಿದ 304 ಪ್ರಕರಣಗಳು ವರದಿಯಾಗಿದ್ದು, ದುರಂತದಿಂದ 20 ಮಂದಿ ಮೃತಪಟ್ಟಿದ್ದಾರೆ. 87 ಪ್ರವಾಹ ಸಂಬಂಧಿತ ದುರಂತಗಳು ಘಟಿಸಿದ್ದು, ಇದರಿಂದ ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಮಳೆಯಿಂದಾಗಿ ಸಂಭವಿಸಿದ 151 ಅವಘಡಗಳಲ್ಲಿ ಮೂವರು ಮೃತರಾಗಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದಲ್ಲದೇ, ಮಳೆಯಿಂದಾಗಿ 1,082 ಕುಟುಂಬಗಳು ಅತಂತ್ರ ಸ್ಥಿತಿಗೆ ತಲುಪಿದ್ದು, 114 ಜಾನುವಾರುಗಳು ಮೃತಪಟ್ಟಿವೆ. 227 ಮನೆಗಳು ಸಂಪೂರ್ಣ ಕೊಚ್ಚಿಹೋಗಿದ್ದು, 142 ಮನೆಗಳು ಹಾನಿಗೀಡಾಗಿವೆ. ಭೂ ಕುಸಿತ, ಪ್ರವಾಹದಿಂದ 31 ಸೇತುವೆಗಳು ನಾಶವಾಗಿವೆ ಎಂದೂ ತಿಳಿಸಿದ್ದಾರೆ.
ಆಗಸ್ಟ್ 26ರಂದು ಘಟಿಸಿದ್ದ ದಿಢೀರ್ ಪ್ರವಾಹದಿಂದ 1,453 ಮಂದಿ ಮೃತಪಟ್ಟು, 5,000 ಮಂದಿ ಕಾಣೆಯಾಗಿದ್ದರು.

