ಕಾಸರಗೋಡು: ವಿನಾಯಕ ಚತುರ್ಥಿಯ ಹಬ್ಬದ ಸಂಭ್ರಮಕ್ಕೆ ಕಾಸರಗೋಡು ನೆಲ್ಲಿಕುಂಜೆ ನಿವಾಸಿ ಲಕ್ಷ್ಮೀಶ ಆಚಾರ್ಯ ಅವರ ಕೈಚಳಕದಿಂದ ತಯಾರಾಗುವ ಗಣೇಶನ ವಿಗ್ರಹ ಮತ್ತಷ್ಟು ಮೆರಗು ತಂದೊಡ್ಡುತ್ತಿದೆ. ಕಳೆದ 34ವರ್ಷಗಳಿಂದ ಗಣೇಶನ ವಿಗ್ರಹ ತಯಾರಿಯಲ್ಲಿ ತೊಡಗಿಸಿಕೊಂಡಿರುವ ಲಕ್ಷ್ಮೀಶ ಆಚಾರ್ಯ ತಂಡ, ಸುಂದರ ವಿಗ್ರಹ ತಯಾರಿಯಲ್ಲಿ ಮನೆಮಾತಾಗಿದ್ದಾರೆ.
ತಮ್ಮ ಮನೆ ಆವರಣದಲ್ಲೇ ಈ ಸುಂದರ ವಿಗ್ರಹಗಳು ತಯಾರಾಗುತ್ತಿದೆ. ದಶಕದ ಹಿಂದೆ ಜಿಲ್ಲೆಯ ಸಂಘ ಸಂಸ್ಥೆಗಳು, ಮಂದಿರ, ದೇಗುಲ, ಮನೆಗಳಲ್ಲಿ ಆರಾಧಿಸುವ ಬಹುತೇಕ ವಿಗ್ರಹಗಳನ್ನು ಲಕ್ಷ್ಮೀಶ ಆಚಾರ್ಯ ಅವರ ತಂಡ ನಿರ್ಮಾಣಮಾಡುತ್ತಿತ್ತು. ಕಾಸರಗೋಡು ಜಿಲ್ಲೆಯಲ್ಲೇ ಯಥೇಚ್ಛವಾಗಿ ಲಭ್ಯವಾಗುತ್ತಿದ್ದ ಆವೆಮಣ್ಣಿಗೆ ಇಂದು ದೂರದ ಮಂಗಳೂರಿನಿಂದ ತೆರಳಬೇಕಾಗುತ್ತಿದೆ. ಬೆಲೆಯೂ ದುಬಾರಿ. ವರ್ಷ ಉರುಳುತ್ತಿದ್ದಂತೆ ಆವೆಮಣ್ಣಿನ ಲಭ್ಯತೆ ಕಡಿಮೆಯಾಗುತ್ತಾ ಬಂದಿದ್ದು, ನಿರ್ಮಾಣ ವೆಚ್ಚದಲ್ಲಿನ ಏರಿಕೆಯಿಂದ ವಿಗ್ರಹ ತಯಾರಿಯ ಸಂಖ್ಯೆಯನ್ನೂ ಕಡಿಮೆ ಮಾಡಬೇಕಾಗಿ ಬಂದಿದೆ. ಕುಟುಂಬ ಸದಸ್ಯರನ್ನಷ್ಟೆ ಸೇರಿಸಿಕೊಂಡು ಈ ವರ್ಷ ದೊಡ್ಡ ಹಾಗೂ ಸಣ್ಣ ಗಾತ್ರದ ಹದಿನೈದರಷ್ಟು ವಿಗ್ರಹಗಳನ್ನು ತಯಾರಿಸಿಕೊಡಲು ಆರ್ಡರ್ ತೆಗೆದುಕೊಂಡಿರುವುದಾಗಿ ಲಕ್ಷ್ಮೀಶ ಆಚಾರ್ಯ ತಿಳಿಸುತ್ತಾರೆ.
ಅತ್ಯಂತ ನಾಜೂಕುತನದ, ಸುಂದರ ಹಾಗೂ ಕಲಾತ್ಮಕ ಶೈಲಿಯ ವಿಗ್ರಹ ತಯಾರಿ ಇವರಲ್ಲಿ ತಯಾರಾಗುವ ವಿಗ್ರಹಗಳ ವಿಶೇಷತೆಯಾಗಿದ್ದು, ಇದಕ್ಕಾಗಿ ಜನರು ಲಕ್ಷ್ಮೀಶ ಆಚಾರ್ಯ ಅವರನ್ನು ಅರಸಿ ಬರುತ್ತಿದ್ದಾರೆ.



