ಕಾಸರಗೋಡು: ಖ್ಯಾತ ಪತ್ರಕರ್ತ ಹಾಗೂ ಯೂಟ್ಯೂಬರ್ ರವೀಂದ್ರ ಜೋಶಿ ಮೈಸೂರು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕುರಿತಾಗಿ ರಚಿಸಿರುವ'ಅಮಿತ್ ಶಾ-ವಿಜಯಪಥ' ಹಾಗೂ 'ಯೋಗಿ ಆದಿತ್ಯನಾಥ್ ಅಗ್ನಿಪಥ' ಪುಸ್ತಕಗಳ ಬಿಡುಗಡೆ ಸಮಾರಂಭ, ಬಿಜೆಪಿ ಜಿಲ್ಲಾ ಸಮಿತಿ ಕಚೇರಿ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಜರುಗಿತು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಹಾಗೂ ಹಿರಿಯ ಸಾಮಾಜಿಕ ಕಾರ್ಯಕರ್ತೆ ಸವಿತಾ ಟೀಚರ್ ಪುಸ್ತಕಗಳನ್ನು ಬಿಡುಗಡೆಗೊಳಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಅಶ್ವಿನಿ ಎಂ.ಎಲ್. ಪುಸ್ತಕಗಳನ್ನು ಸ್ವೀಕರಿಸಿದರು.
ಭಾರತದ ಗ್ರಾಮೀಣ ಪ್ರದೇಶಗಳನ್ನು ಬಾಧಿಸುತ್ತಿದ್ದ ನಕ್ಸಲಿಸಂ, ಮಾವೋಯಿಸಂ ಸೇರಿದಂತೆ ಉಗ್ರವಾದಿ ಸಿದ್ಧಾಂತಗಳನ್ನು ನಿರ್ಮೂಲನೆ ಮಾಡುವಲ್ಲಿ ಮತ್ತು ಅದಕ್ಕೆ ಆಕರ್ಷಿತರಾಗಿದ್ದವರನ್ನು ಮುಖ್ಯವಾಹಿನಿಗೆ ತರುವಲ್ಲಿ ಅಮಿತ್ ಶಾ ವಹಿಸಿದ ಪಾತ್ರವನ್ನು ಮುಂಬರುವ ಪೀಳಿಗೆಗಳು ಸದಾ ಕೃತಜ್ಞತೆಯಿಂದ ನೆನಪಿಸಿಕೊಳ್ಳಲಿವೆ ಎಂದು ಸವಿತಾ ಟೀಚರ್ ಹೇಳಿದರು. ಇಪ್ಪತ್ತು ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಉತ್ತರ ಪ್ರದೇಶವು ಹಿಂದುಳಿದ ರಾಜ್ಯ ಎಂಬ ಸ್ಥಿತಿಯಿಂದ ಭಾರತದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುವ ರಾಜ್ಯವಾಗಿ ಬೆಳೆದಿರುವುದು ಯೋಗಿ ಆದಿತ್ಯನಾಥ್ ಅವರ ನಾಯಕತ್ವದಲ್ಲಿ ಎಂದು ಅವರು ತಿಳಿಸಿದರು.
ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಕೇವಲ ರಾಜಕೀಯ ನಾಯಕರಷ್ಟೇ ಅಲ್ಲ, ಇವರು ಭಾರತದ ಭವಿಷ್ಯವನ್ನು ನಿರ್ಧರಿಸುವ ವ್ಯಕ್ತಿತ್ವಗಳಾಗಿದ್ದಾರೆ ಹಾಗೂ ಅವರ ಕಾರ್ಯಗಳನ್ನು ಪ್ರತಿಯೊಬ್ಬ ನಾಗರಿಕನೂ ತಿಳಿದುಕೊಳ್ಳಬೇಕಾಗಿದೆ. ಈ ಉದ್ದೇಶದಿಂದಲೇ ಇಬ್ಬರು ಮಹಾನ್ ನಾಯಕರ ಕುರಿತಾದ ಪುಸ್ತಕಗಳನ್ನು ರಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಎರಡು ತೋಳುಗಳಂತೆ ದೇಶದ ಅಭಿವೃದ್ಧಿ ಹಾಗೂ ಭದ್ರತಾ ಕಾರ್ಯದಲ್ಲಿ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ತಮ್ಮದೇ ಆದ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು. ಕಾಸರಗೋಡು ಜಿಲ್ಲೆಯ ಜನತೆ ಹಾಗೂ ಚಿತ್ರನಟ ಕಾಸರಗೋಡು ಚಿನ್ನಾ ಅವರೊಂದಿಗಿನ ಆತ್ಮೀಯ ಸಂಬಂಧ ಪುಸ್ತಕ ಬಿಡುಗಡೆಗಾಗಿ ಕಾಸರಗೋಡು ಜಿಲ್ಲೆಯನ್ನು ಆಯ್ಕೆ ಮಾಡಲು ಕಾರಣ ಎಂದು ರವೀಂದ್ರ ಜೋಶಿ ಹೇಳಿದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಸಾಂಸ್ಕøತಿಕ-ಚಲನಚಿತ್ರ ಕ್ಷೇತ್ರದ ಪ್ರಮುಖರಾದ ಎಸ್. ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನಾ) ಸೇರಿದಂತೆ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.



