ಮಾಸ್ಕೊ (AFP): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ ಪಕ್ಷವು ರಷ್ಯಾದ ಸಂಸತ್‌ನ ಕೆಳಮನೆಯಾದ 'ಡುಮಾ'ದ 450 ಸ್ಥಾನಗಳ ಪೈಕಿ ದಾಖಲೆಯ 355 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಚುನಾವಣೆಯ ಪ್ರಾಥಮಿಕ ಫಲಿತಾಂಶಗಳ ವರದಿಯನ್ನು ಚುನಾವಣಾ ಮುಖ್ಯಸ್ಥೆ ಎಲಾ ಪಾಂಫಿಲೋವಾ ಅವರು ಬಿಡುಗಡೆ ಮಾಡಿದ್ದಾರೆ.
ಪುಟಿನ್ ಅವರನ್ನು ಕಠಿಣವಾಗಿ ಟೀಕಿಸುವ ಪ್ರಮುಖ ವಿರೋಧ ಪಕ್ಷಗಳಿಗೆ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರಲಿಲ್ಲ. ಈ ಚುನಾವಣೆಯ ಮತಗಳ ಎಣಿಕೆ ಬಹುತೇಕ ಮುಗಿದಿದ್ದು, ಪುಟಿನ್ ಅವರ ಪಕ್ಷವು ತನ್ನ ಹಿಂದಿನ 2016ರ ದಾಖಲೆಯ 343 ಸ್ಥಾನಗಳಿಗಿಂತ ಹೆಚ್ಚಿನ ಬಹುಮತ ಪಡೆದುಕೊಂಡಿದೆ.
ರಷ್ಯಾದ ಕಮ್ಯುನಿಸ್ಟ್ ಪಕ್ಷವು 40 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯತಾವಾದಿ ಎಲ್‌ಡಿಪಿಆರ್ ಪಕ್ಷ 25 ಸ್ಥಾನ ಮತ್ತು ನ್ಯೂ ಪೀಪಲ್ ಪಕ್ಷ 20 ಸ್ಥಾನಗಳನ್ನು ಪಡೆದಿವೆ.
'ದೇಶದಲ್ಲಿ ಶೇ 59ಕ್ಕಿಂತ ಹೆಚ್ಚು ಮತದಾನವಾಗಿದೆ. ಶೇ 95ಕ್ಕಿಂತ ಹೆಚ್ಚು ಮತಗಳನ್ನು ಎಣಿಕೆ ಮಾಡಲಾ ಗಿದ್ದು, ಅಂತಿಮ ಫಲಿತಾಂಶಗಳನ್ನು ಈ ವಾರದ ಕೊನೆ ಯಲ್ಲಿ ಪ್ರಕಟಿಸಲಾಗುವುದು' ಎಂದು ಪಾಂಫಿಲೋವಾ ತಿಳಿಸಿದ್ದಾರೆ.

