ಬದಿಯಡ್ಕ: ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರ ಆಶೀರ್ವಾದದೊಂದಿಗೆ 39ನೇ ಎಡನೀರು ಸಾರ್ವಜನಿಕ ಶ್ರೀ ಗಣೇಶೋತ್ಸವವು ಎಡನೀರು ಶ್ರೀಮಠದಲ್ಲಿವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು. ಉತ್ಸವದ ಅಂಗವಾಗಿ ಬೆಳಿಗ್ಗೆ ಮಹಾಗಣಪತಿ ಹವನ ಹಾಗೂ ಧ್ವಜಾರೋಹಣ ನೆರವೇರಿಸಿ, ಗಣಪತಿ ವಿಗ್ರಹದ ಪ್ರತಿಷ್ಠಾಪನೆ ಮಾಡಲಾಯಿತು. ಬಳಿಕ ಭಕ್ತವೃಂದ ಎಡನೀರು ವತಿಯಿಂದ ಭಜನಾ ಸೇವೆ ನಡೆಯಿತು. ಶ್ರೀ ಸಚ್ಚಿದಾನಂದ ಭಾರತಿ ಶ್ರೀಪಾದಂಗಳವರು ದೀಪ ಪ್ರಜ್ವಲಿಸುವ ಮೂಲಕ ಧಾರ್ಮಿಕ ಸಭೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಪ್ರಭಾಕರನ್ ಮಾಸ್ತರ್ ಧಾರ್ಮಿಕ ಭಾಷಣ ಮಾಡಿದರು. ಶ್ರೀ ಎಡನೀರು ಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಮಾಧವ ಹೇರಳ ಕಳೇರಿ, ಉತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಕೆ. ಹಾಗೂ ಮಾತೃ ಸಮಿತಿ ಅಧ್ಯಕ್ಷೆ ಪ್ರಭಾ ಕಲ್ಲೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಧ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ನಂತರ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಡಾ. ವಿದ್ಯಾಲಕ್ಷ್ಮಿ ಅವರ `ನೃತ್ಯ ರಂಗ, ಕುಂಬಳೆ' ತಂಡದಿಂದ `ನೃತ್ಯ ಸಂಭ್ರಮ' ಎಂಬ ಶೀರ್ಷಿಕೆಯಡಿ ಭರತನಾಟ್ಯ ಪ್ರದರ್ಶನ ನಡೆಯಿತು. ಸಂಜೆ ಮಹಾಪೂಜೆಯ ಬಳಿಕ ಕುಣಿತ ಭಜನೆ, ಸಿಂಗಾರಿ ಮೇಳ ಸೇರಿದಂತೆ ವಿವಿಧ ವಾದ್ಯಗಳೊಂದಿಗೆ ಗಣೇಶ ವಿಗ್ರಹ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು. ಅಪಾರ ಸಂಖ್ಯೆಯಲ್ಲಿ ಭಗವದ್ಭಕ್ತರು ಪಾಲ್ಗೊಂಡಿದ್ದರು.

.jpg)
.jpg)
