ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಬುಧವಾರ 1,204ಕ್ಕೆ ಏರಿಕೆಯಾಗಿದೆ.
'1,113 ಮೃತದೇಹಗಳ ಮರಣೋತ್ತರ ಪರೀಕ್ಷೆ ಮತ್ತು ಕಾನೂನಾತ್ಮಕವಾಗಿ ಗುರುತು ಪತ್ತೆ ಮಾಡುವ ಕಾರ್ಯ ಪೂರ್ಣಗೊಂಡಿದೆ. 95 ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
ಗುರುತು ಪತ್ತೆಯಾಗದ 911 ಮೃತದೇಹಗಳ ಮಾಹಿತಿಯನ್ನು ನೇಪಾಳ ಪೊಲೀಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
'ಈವರೆಗೆ 6,541 ಜನರನ್ನು ಭದ್ರತಾ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 4,216 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹಲವೆಡೆ ನಿರಂತರ ಮಳೆಯಾಗುತ್ತಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.
'ಪರ್ವತ ಪ್ರದೇಶಗಳಾದ ಕೋಶಿ, ಭಾಗಮತಿ ಮತ್ತು ಗಂಡಾಕಿ ಪ್ರಾಂತ್ಯಗಳಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯಿದೆ' ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ನುವಾಕೋಟ್ ಜಿಲ್ಲೆಯಲ್ಲಿನ ಪ್ರವಾಹದಿಂದ ಹಾನಿಗೆ ಒಳಗಾದ ಕಟ್ಟಡ - ಎಎಫ್‌ಪಿ ಚಿತ್ರ
ರಕ್ಷಣಾ ಕಾರ್ಯಕ್ಕೆ ಡ್ರೋನ್ ನೆರವು
ನೇಪಾಳದಲ್ಲಿನ ಪ್ರವಾಹ ಪೀಡಿತ ಪ್ರದೇಶದಿಂದ ಮೃತದೇಹಗಳನ್ನು ರವಾನಿಸಲು ಸಹ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ರಕ್ಷಣಾ ಸಿಬ್ಬಂದಿ ತಲುಪಲು ಅಸಾಧ್ಯವಾದ ಸ್ಥಳಗಳಿಂದ ಈ ವಾರ ಏಳು ಮೃತದೇಹಗಳನ್ನು ಡ್ರೋನ್ ಮೂಲಕ ಮೇಲೆತ್ತಲಾಗಿದೆ ಎಂದು ಕಠ್ಮಂಡು ಪೋಸ್ಟ್ ಪತ್ರಿಕೆ ಬುಧವಾರ ವರದಿ ಮಾಡಿದೆ.
ಸಂಪರ್ಕ ಕಡಿತಗೊಂಡಿರುವ ಸ್ಥಳಗಳಿಗೆ ಆಹಾರ ಮತ್ತು ಔಷಧ ರವಾನೆಗೆ ಹಾಗೂ ದುರ್ಗಮ ಪ್ರದೇಶದಲ್ಲಿ ಸಿಲುಕಿವವರ ಪತ್ತೆಗೂ ಡ್ರೋನ್‌ಗಳನ್ನು ಬಳಸಲಾಗುತ್ತಿದೆ. 'ದೇವಿಘಾಟ್-3ರ ಪ್ರದೇಶದಲ್ಲಿ ಇತ್ತೀಚೆಗೆ ಎ.ಐ ಆಧಾರಿತ ಡ್ರೋನ್‌ಗಳನ್ನು ಬಳಸಲಾಗಿತ್ತು. ಈ ಪ್ರದೇಶದಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಗ್ರಾಮಸ್ಥರಿಗೆ ನೀರು ಆಹಾರ ಔಷಧದ ಮುಂತಾದ ಅಗತ್ಯ ವಸ್ತುಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಅವರಿಂದ ದೊರೆತ ಉತ್ತರವನ್ನು ಅರಿತು ಅಗತ್ಯ ನೆರವು ನೀಡಲಾಯಿತು' ಎಂದು ಏರ್‌ಲಿಫ್ಟ್ ಟೆಕ್ನಾಲಜಿಯ ನಿರ್ದೇಶಕ ಮಿಲನ್ ಪಾಂಡೆ ಅವರು ತಿಳಿಸಿದ್ದಾರೆ. 'ಆಹಾರ ಸೇರಿದಂತೆ 1.15 ಟನ್ ಅಗತ್ಯ ವಸ್ತುಗಳನ್ನು ಮೂರು ದಿನಗಳಲ್ಲಿ ಡ್ರೋನ್ ಮೂಲಕ ಪೂರೈಸಲಾಗಿದೆ' ಎಂದು ತಿಳಿಸಿದ್ದಾರೆ.
ಸಂತ್ರಸ್ತರಿಗೆ ನಟ ಸೂನು ಸೂದ್ ನೆರವು
ಮುಂಬೈ: ನಟ ಸೋನು ಸೂದ್ ಅವರು ಪ್ರವಾಹ ಸಂತ್ರಸ್ತರಿಗಾಗಿ ಆಹಾರ ಮತ್ತು ಇತರ ಪರಿಹಾರ ಸಾಮಗ್ರಿಗಳ ಜೊತೆ ಕಠ್ಮಂಡು ತಲುಪಿದ್ದಾರೆ.
'ಪ್ರವಾಹ ಸಂತಸ್ತರನ್ನು ಭೇಟಿಯಾಗಲು ಇಲ್ಲಿಗೆ ಬಂದಿದ್ದೇವೆ. ನೆರವಿನ ಅಗತ್ಯವಿರುವವರ ಜತೆ ನಿಲ್ಲುತ್ತೇವೆ ಮತ್ತು ಅವರ ಜೀವನ ಸಹಜ ಸ್ಥಿತಿಗೆ ಮರಳುವಂತೆ ಮಾಡಲು ಪ್ರಯತ್ನಿಸುತ್ತೇವೆ. ಅವರಿಗೆ ಅಗತ್ಯವಾದ ವಸ್ತುಗಳನ್ನು ಭಾರತದಿಂದ ಕಳುಹಿಸಲು ಪ್ರಯತ್ನಿಸುತ್ತೇವೆ' ಎಂದು ಸೂದ್ ತಿಳಿಸಿದರು.
ಭಾರತದಿಂದ ನೆರವು: ನೇಪಾಳಕ್ಕೆ ಐದನೇ ಹಂತದ ನೆರವಿನ ಭಾಗವಾಗಿ ಐದು ಟನ್‌ಗೂ ಅಧಿಕ ಪ್ರಮಾಣದ ಅಗತ್ಯ ಔಷಧ ಮತ್ತು ಆಹಾರವನ್ನು ಭಾರತ ಬುಧವಾರ ಕಳುಹಿಸಿದೆ. ಇದರ ಜೊತೆಗೆ 11 ಮಂದಿಯ ರಕ್ಷಣಾ ತಂಡವು ತೆರಳಿದೆ. ಈಗಾಗಲೇ 68.5 ಟನ್ ಅಗತ್ಯ ವಸ್ತುಗಳನ್ನು ಭಾರತ ನೇಪಾಳಕ್ಕೆ ರವಾನಿಸಿದೆ.
ಹವಾಮಾನ ಬದಲಾವಣೆ ಕಾರಣ: ನೇಪಾಳ ಪ್ರಧಾನಿ ನೇಪಾಳದಲ್ಲಿ ಸಂಭವಿಸಿರುವ ಪ್ರವಾಹಕ್ಕೆ ಹವಾಮಾನ ಬದಲಾವಣೆ ಕಾರಣ ಮತ್ತು ಅದನ್ನು ಕಡಿಮೆ ಮಾಡುವ ಮತ್ತು ನಿಯಂತ್ರಿಸುವ ಹೊಣೆ ಜಾಗತಿಕ ಸಮುದಾಯದ ಮೇಲಿದೆ ಎಂದು ನೇಪಾಳದ ಪ್ರಧಾನಿ ಬಾಲೇಂದ್ರ ಶಾ ಅವರು ಬುಧವಾರ ಹೇಳಿದ್ದಾರೆ. ಸಂಸತ್ತಿನಲ್ಲಿ ಈ ಬಗ್ಗೆ ವಿವರಿಸಿದ ಅವರು 'ಹವಾಮಾನ ಬದಲಾವಣೆಗೆ ಜಾಗತಿಕ ಸಮುದಾಯದ ಕೊಡುಗೆ ಇದೆ. ಹವಾಮಾನ ವೈಪರಿತ್ಯದಿಂದ ಪರ್ವತ ಪ್ರದೇಶಗಳ ಜನರಿಗೆ ಎದುರಾಗುವ ಅಪಾಯಗಳು ಹೆಚ್ಚುತ್ತಿರುವುದನ್ನು ಈ ಘಟನೆ ತೋರಿಸುತ್ತದೆ' ಎಂದು ಹೇಳಿದರು.

