ಹೊರ್ಮುಜ್ ಜಲಸಂಧಿಯಲ್ಲಿ ಸ್ಫೋಟಕಗಳನ್ನು ಇರಿಸುವ ಇರಾನ್ನ ಪ್ರಯತ್ನವನ್ನು ವಿಫಲಗೊಳಿಸಲು ಹಾಗೂ ಜೋರ್ಡಾನ್ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ಮಂಗಳವಾರ ಇರಾನ್ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇರಾನ್ ಮೇಲಿನ ಅಮೆರಿಕದ ಇತ್ತೀಚಿನ ದಾಳಿಯನ್ನು ಸಮರ್ಥಿಸಿಕೊಂಡ ಅವರು, ಟೆಹರಾನ್ ಮತ್ತೆ ದಾಳಿ ನಡೆಸಿದರೆ ಇನ್ನೂ ದೊಡ್ಡ ಮಟ್ಟದ ದಾಳಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಭಾರಿ ದಾಳಿ ನಡೆಸಿದ ಬೆನ್ನಲ್ಲೇ, ಪಶ್ಚಿಮ ಏಷ್ಯಾದಾದ್ಯಂತ ಇರುವ ಅದರ ನೆಲೆಗಳ ಮೇಲೆ ಇರಾನ್ ಬುಧವಾರ ಸರಣಿ ದಾಳಿ ಮುಂದುವರಿಸಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಜೋರ್ಡನ್, ಕುವೈತ್, ಬಹರೇನ್ ಹಾಗೂ ಇರಾಕ್ನ ಸ್ವಾಯತ್ತ ಕುರ್ದಿಸ್ತಾನ ಪ್ರದೇಶದಲ್ಲಿನ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಕೋರ್ (ಐಆರ್ಜಿಸಿ) ತಿಳಿಸಿದೆ.
ವಾಯು ರಕ್ಷಣಾ ನೆಲೆಗಳು, ರಾಡಾರ್ ವ್ಯವಸ್ಥೆಗಳು, ನೌಕಾಪಡೆಯ ಸೌಲಭ್ಯಗಳು ಸೇರಿದಂತೆ ಐಆರ್ಜಿಸಿ ಗುರಿಗಳ ಮೇಲೆ ಯುಎಸ್ ಪಡೆಗಳು ದಾಳಿ ನಡೆಸಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ 'ಎಕ್ಸ್'ನಲ್ಲಿ ತಿಳಿಸಿದೆ.
ಹೊರ್ಮುಜ್ ಜಲಸಂಧಿಯ ಬಳಿ ಸ್ಪೋಟಕಗಳನ್ನು ಇರಿಸಲು ವಿಫಲ ಯತ್ನ ನಡೆಸಿದ್ದಕ್ಕೆ ಮತ್ತು ಜೋರ್ಡಾನ್ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಎಂಟು ಕ್ಷಿಪಣಿಗಳನ್ನು ಉಡಾಯಿಸಿದ್ದಕ್ಕೆ ಪ್ರತೀಕಾರವಾಗಿ ಇರಾನ್ ಮೇಲೆ ದಾಳಿ ನಡೆಸಲಾಗಿದೆ. ಸಂಧಾನಕ್ಕೆ ಬರುವಂತೆ ನಾವು ಆ ರಾಷ್ಟ್ರವನ್ನು ಬಲವಂತಪಡಿಸುತ್ತಿಲ್ಲ. ಆದರೆ ಇರಾನ್ನ ಜನತೆ ಯಾವಾಗ ಸರ್ಕಾರದ ವಿರುದ್ಧ ತಿರುಗಿಬಿದ್ದು ಹೋರಾಡುತ್ತಾರೆ? ಎಂದು ಸಾಮಾಜಿಕ ಜಾಲತಾಣ 'ಟ್ರುಥ್ ಸೋಶಿಯಲ್' ಪೋಸ್ಟ್ನಲ್ಲಿ ಟ್ರಂಪ್ ಪ್ರಶ್ನಿಸಿದ್ದಾರೆ.

