ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭೆ ಚುನಾವಣೆಗಳ ಸಂದರ್ಭದಲ್ಲಿ ಬಿಜೆಪಿಯ ಕೇಂದ್ರ ಕಚೇರಿಗೆ ಒಟ್ಟು 1,472.8 ಕೋಟಿ ರೂ. ಆದಾಯ ಬಂದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಬಿಜೆಪಿ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಸ್ಸಾಂ, ತಮಿಳುನಾಡು ಮತ್ತು ಪುದುಚೇರಿಯ ಚುನಾವಣಾ ವೆಚ್ಚದ ವಿವರಗಳನ್ನು ಆಧರಿಸಿ ಈ ವರದಿ ಪ್ರಕಟಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.
ಮಾರ್ಚ್ 15, 2026ರಂದು ಪಕ್ಷದ ಅಂತಿಮ ಉಳಿಕೆ ಮೊತ್ತ 6,722.6 ಕೋಟಿ ರೂ. ಇತ್ತು. ಮೇ 6, 2026ರಂದು ಚುನಾವಣೆಗಳು ಪೂರ್ಣಗೊಂಡಾಗ ಬಿಜೆಪಿಯ ಅಂತಿಮ ಉಳಿಕೆ ಮೊತ್ತ 7,627.2 ಕೋಟಿ ರೂ.ಗೆ ಏರಿಕೆಯಾಗಿದೆ.
ಬಿಜೆಪಿಯ ಕೇಂದ್ರ ಕಚೇರಿ ಸೇರಿದಂತೆ ಸಂಬಂಧಪಟ್ಟ ರಾಜ್ಯ ಮತ್ತು ಜಿಲ್ಲಾ ಘಟಕಗಳನ್ನು ಒಳಗೊಂಡಂತೆ, ಅಸ್ಸಾಂ, ತಮಿಳುನಾಡು ಹಾಗೂ ಪುದುಚೇರಿ ವಿಧಾನಸಭೆ ಚುನಾವಣೆಗಳಿಗಾಗಿ ಪಕ್ಷವು ಒಟ್ಟು 160 ಕೋಟಿ ರೂ. ವೆಚ್ಚ ಮಾಡಿದೆ.
ಇದರಲ್ಲಿ ಅಸ್ಸಾಂನಲ್ಲಿ ಅತಿ ಹೆಚ್ಚು 96.3 ಕೋಟಿ ರೂ., ತಮಿಳುನಾಡಿನಲ್ಲಿ 51.6 ಕೋಟಿ ರೂ. ಹಾಗೂ ಪುದುಚೇರಿಯಲ್ಲಿ 11.9 ಕೋಟಿ ರೂ. ಖರ್ಚಾಗಿದೆ.
ಒಟ್ಟು ವೆಚ್ಚದಲ್ಲಿ ಸುಮಾರು 130.4 ಕೋಟಿ ರೂ. ಅನ್ನು ಸಾಮಾನ್ಯ ಪಕ್ಷದ ಪ್ರಚಾರಕ್ಕಾಗಿ ಬಳಸಲಾಗಿದೆ. ಉಳಿದ 29.6 ಕೋಟಿ ರೂ. ಅನ್ನು ಅಭ್ಯರ್ಥಿಗಳಿಗೆ ಸಂಬಂಧಿಸಿದ ಚುನಾವಣಾ ವೆಚ್ಚಗಳಿಗಾಗಿ ನೀಡಲಾಗಿದೆ.
ಪಶ್ಚಿಮ ಬಂಗಾಳ ಮತ್ತು ಕೇರಳ ವಿಧಾನಸಭೆ ಚುನಾವಣೆಗಳ ವೆಚ್ಚದ ವಿವರಗಳನ್ನು ಚುನಾವಣಾ ಆಯೋಗವು ಇನ್ನೂ ಸಾರ್ವಜನಿಕವಾಗಿ ಬಿಡುಗಡೆ ಮಾಡಿಲ್ಲ.
ಅಸ್ಸಾಂಗೆ ಸಂಬಂಧಿಸಿದ ಬಿಜೆಪಿಯ ಚುನಾವಣಾ ವೆಚ್ಚದ ವಿವರಗಳ ಪ್ರಕಾರ, ಪಕ್ಷವು ಸಾಮಾನ್ಯ ಪ್ರಚಾರಕ್ಕಾಗಿ 76.7 ಕೋಟಿ ರೂ. ಖರ್ಚು ಮಾಡಿದೆ. ಇದರಲ್ಲಿ ಕೇಂದ್ರ ಘಟಕದಿಂದ 23.1 ಕೋಟಿ ರೂ. ವೆಚ್ಚವಾಗಿದ್ದು, ಅಭ್ಯರ್ಥಿಗಳಿಗೆ 19.5 ಕೋಟಿ ರೂ. ನೀಡಲಾಗಿದೆ.
ಅಸ್ಸಾಂನಲ್ಲಿ ಸ್ಟಾರ್ ಪ್ರಚಾರಕರ ಪ್ರಯಾಣ ವೆಚ್ಚಕ್ಕಾಗಿ 27.3 ಕೋಟಿ ರೂ., ಜಾಹೀರಾತುಗಳಿಗಾಗಿ 37 ಕೋಟಿ ರೂ., ಪ್ರಚಾರ ಸಾಮಗ್ರಿಗಳಿಗಾಗಿ 8.9 ಕೋಟಿ ರೂ. ಹಾಗೂ ರಾಜ್ಯ ಘಟಕದ ಇತರ ವೆಚ್ಚಗಳಿಗಾಗಿ 2.3 ಕೋಟಿ ರೂ. ಖರ್ಚು ಮಾಡಲಾಗಿದೆ.
ಅಭ್ಯರ್ಥಿಗಳಿಗೆ ಒಟ್ಟು 19.4 ಕೋಟಿ ರೂ. ಅನ್ನು ಒಟ್ಟಾರೆ ಮೊತ್ತವಾಗಿ ನೀಡಲಾಗಿದ್ದು, ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಕುರಿತು ಪ್ರಚಾರ ನಡೆಸಲು 16.7 ಲಕ್ಷ ರೂ. ವೆಚ್ಚ ಮಾಡಲಾಗಿದೆ.
ತಮಿಳುನಾಡಿನಲ್ಲಿ ಬಿಜೆಪಿ ಸಾಮಾನ್ಯ ಪಕ್ಷದ ಪ್ರಚಾರಕ್ಕಾಗಿ ಒಟ್ಟು 44.5 ಕೋಟಿ ರೂ. ವೆಚ್ಚ ಮಾಡಿದ್ದು, ಅಭ್ಯರ್ಥಿಗಳಿಗಾಗಿ ಹೆಚ್ಚುವರಿಯಾಗಿ 7 ಕೋಟಿ ರೂ. ಖರ್ಚು ಮಾಡಿದೆ.
ಇದೇ ಚುನಾವಣೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು ಈ ಹಿಂದೆ ಬಿಡುಗಡೆ ಮಾಡಿದ್ದ ಚುನಾವಣಾ ವೆಚ್ಚದ ವಿವರಗಳ ಪ್ರಕಾರ, ಪಕ್ಷವು ಒಟ್ಟು 248.6 ಕೋಟಿ ರೂ. ಖರ್ಚು ಮಾಡಿದೆ.

