ಬದಿಯಡ್ಕ: ಬದಿಯಡ್ಕದಲ್ಲಿ 55ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಹಾಗೂ 7ನೇ ವರ್ಷದ ಪ್ರತಿಷ್ಠಾದಿನವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಭಾನುವಾರ ಪ್ರಾರಂಭವಾಗಿ ಮಂಗಳವಾರ ಶ್ರೀಗಣೇಶನ ವಿಗ್ರಹ ವಿಸರ್ಜನೆಯೊಂದಿಗೆ ಸಂಪನ್ನವಾಯಿತು. ಸಹಸ್ರಾರು ಮಂದಿ ಭಗವದ್ಭಕ್ತರು ಪಾಲ್ಗೊಂಡು ಶ್ರೀದೇವರ ಪ್ರಸಾದವನ್ನು ಪಡೆದುಕೊಂಡರು.
ವೇದಮೂರ್ತಿ ಶಿವಶಂಕರ ಭಟ್ ಪಳ್ಳತ್ತಡ್ಕ ಇವರ ಪೌರೋಹಿತ್ಯದಲ್ಲಿ ಶ್ರೀಗಣೇಶ ವಿಗ್ರಹ ಪ್ರತಿಷ್ಠೆ, ಪೂಜಾದಿ ಕಾರ್ಯಗಳು ಜರಗಿದವು. ಶಿವಾಜಿ ಗಲ್ಲಿ, ಯುವಶಕ್ತಿ, ಛತ್ರಪತಿ, ಓಂಕಾರ್, ಆರ್‍ಸಿಬಿ, ಧೀರಾಸ್, ಅಗ್ನಿ, ಶಕ್ತಿ, ಕುಣಿತ ಭಜನೆಯ ತಂಡಗಳಿಂದ ವಿವಿಧ ಸಾಂಸ್ಕøತಿಕ ಕಲಾಕೃತಿಗಳು ಜನಮನಸೂರೆಗೊಂಡವು. ಮಂಗಳೂರು, ಪುತ್ತೂರು, ಕಾಸರಗೋಡು ಮೊದಲಾದೆಡೆಗಳಿಂದ ಭಗವದ್ಭಕ್ತರು ಶ್ರೀಗಣೇಶ ವಿಗ್ರಹ ವಿಸರ್ಜನಾ ಮೆರವಣಿಗೆಗೆ ಆಗಮಿಸಿದ್ದರು. ಮುತ್ತುಕೊಡೆ, ಸಿಂಗಾರಿಮೇಳ, ಚೆಂಡೆ ವಾದ್ಯಗಳು, ವಿವಿಧ ಕಲಾಕೃತಿಗಳು, ನೃತ್ಯ, ಭಜನೆಗಳು ಮೆರವಣಿಗೆಗೆ ಶೋಭೆ ನೀಡಿತು. ರನ್ನಿಂಗ್ ಡಿ.ಜೆ., ಫಯರ್ ಡ್ಯಾನ್ಸ್‍ಗಲ್ರ್ಸ್, ಕುಣಿತ ಭಜನೆ, ನಾಸಿಕ್ ಬ್ಯಾಂಡ್, ಭದ್ರಕಾಳಿ ಅಘೋರಿ ನೃತ್ಯ, ಮಿಕ್ಕಿಮೌಸ್ ಶೋ, ಲೇಸರ್ ಶೋ ವಿದ್ ಪಿ.ಎಸ್.ಎಲ್.ಸೌಂಡ್, ಸ್ಥಬ್ದಚಿತ್ರ, ತಾಂಬೋಲಂ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡಿತು. ರಾತ್ರಿ ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಮುಂಭಾಗದಲ್ಲಿ ಹರಿಯುತ್ತಿರುವ ವರದಾ ನದಿಯ ತಟದಲ್ಲಿ ಪೂಜೆ, ಪ್ರಾರ್ಥನೆ, ಧ್ವಜಾವತರಣ, ವಿಗ್ರಹ ನಿಮಂಜನೆಯೊಂದಿಗೆ ಕಾರ್ಯಕ್ರಮಗಳು ಸಂಪನ್ನವಾಯಿತು.

