ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಜಾರಿಗೆ ತಂದಿರುವ ತ್ರಿಭಾಷಾ ನೀತಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆರನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ವಿನಾಯಿತಿ ಅಥವಾ ಸೂಕ್ತ ರಿಯಾಯಿತಿ ನೀಡುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ CBSEಗೆ ಸೂಚಿಸಿದೆ.
ತ್ರಿಭಾಷಾ ನೀತಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 17ಕ್ಕೆ ಮುಂದೂಡಿದೆ. ಇದೇ ವೇಳೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರನೇ ತರಗತಿಯ ವಿದ್ಯಾರ್ಥಿಗಳಿಗೆ ತ್ರಿಭಾಷಾ ನೀತಿಯಿಂದ ವಿನಾಯಿತಿ ಅಥವಾ ಇತರ ಅನುಕೂಲ ಕಲ್ಪಿಸುವ ಅವಕಾಶ ಇದೆಯೇ? ಎಂಬುದನ್ನು ಪರಿಶೀಲಿಸುವಂತೆ ಹೇಳಿದೆ.
'ಈ ವರ್ಷದ 6ನೇ ತರಗತಿ ಮಕ್ಕಳನ್ನು ಪರಿಗಣಿಸಿ'
ತ್ರಿಭಾಷಾ ನೀತಿ ಜಾರಿಯಿಂದ ವಿದ್ಯಾರ್ಥಿಗಳಿಗೆ ಉಂಟಾಗಬಹುದಾದ ಒತ್ತಡದ ಕುರಿತು ನ್ಯಾಯಾಲಯ ಈ ಹಿಂದೆಯೂ ಕಳವಳ ವ್ಯಕ್ತಪಡಿಸಿತ್ತು. 6ನೇ ತರಗತಿಯನ್ನು ಹೊಸ ವ್ಯವಸ್ಥೆಯ ಆರಂಭದ ಹಂತವಾಗಿ ಆಯ್ಕೆ ಮಾಡಿಕೊಂಡಿದ್ದರೆ ಪ್ರಸಕ್ತ ವರ್ಷದ ಆರನೇ ತರಗತಿ ವಿದ್ಯಾರ್ಥಿಗಳಿಗೆ ರಿಯಾಯಿತಿ ನೀಡಿ ಮುಂದಿನ ವರ್ಷದಿಂದ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುವ ಸಾಧ್ಯತೆಯನ್ನು ಪರಿಶೀಲಿಸಬಹುದು ಎಂಬ ಅಭಿಪ್ರಾಯವನ್ನು ಪೀಠ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯದ ಸಲಹೆಯ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಮತ್ತೆ ನ್ಯಾಯಾಲಯಕ್ಕೆ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಏನಿದು CBSE ತ್ರಿಭಾಷಾ ನೀತಿ?
ರಾಷ್ಟ್ರೀಯ ಶಿಕ್ಷಣ ನೀತಿ (NEP)-2020 ಹಾಗೂ ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF-SE)-2023ಕ್ಕೆ ಅನುಗುಣವಾಗಿ CBSE ತನ್ನ ಭಾಷಾ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆಗಳನ್ನು ತಂದಿದೆ.
CBSEಯ 2026-27ರ ಅಧ್ಯಯನ ಯೋಜನೆಯ ಭಾಗವಾಗಿ 6ನೇ ತರಗತಿಯಲ್ಲಿ 'R3' ಅಂದರೆ ಮೂರನೇ ಭಾಷೆಯನ್ನು ಪರಿಚಯಿಸುವ ಕುರಿತು ಶಾಲೆಗಳಿಗೆ ಸೂಚಿಸಲಾಗಿತ್ತು. ಮೇ 4ರಂದು ಹೊರಡಿಸಿದ CBSE ಸುತ್ತೋಲೆಯಲ್ಲಿ 6ನೇ ತರಗತಿಯಲ್ಲಿ ಮೂರನೇ ಭಾಷೆ ಪರಿಚಯಿಸುವ ಹಿಂದಿನ ಸೂಚನೆಯನ್ನು ಪಾಲಿಸುವಂತೆ ಸಂಯೋಜಿತ ಶಾಲೆಗಳಿಗೆ ತಿಳಿಸಲಾಗಿತ್ತು.
2026ರ ಜುಲೈ 1ರಿಂದ 9ನೇ ತರಗತಿ ವಿದ್ಯಾರ್ಥಿಗಳು ಮೂರು ಭಾಷೆಗಳನ್ನು ಕಲಿಯುವುದನ್ನು ಕಡ್ಡಾಯಗೊಳಿಸುವ ವ್ಯವಸ್ಥೆಯೂ ಜಾರಿಗೆ ಬಂದಿದೆ. ಈ ಮೂರು ಭಾಷೆಗಳಲ್ಲಿ ಕನಿಷ್ಠ ಎರಡು ಭಾರತೀಯ ಭಾಷೆಗಳಾಗಿರಬೇಕು. ವಿದೇಶಿ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳು ಎರಡು ಭಾರತೀಯ ಭಾಷೆಗಳ ಜೊತೆಗೆ ಮೂರನೇ ಅಥವಾ ಹೆಚ್ಚುವರಿ ನಾಲ್ಕನೇ ಭಾಷೆಯಾಗಿ ಅದನ್ನು ಆಯ್ಕೆ ಮಾಡಿಕೊಳ್ಳಬಹುದು.

