ಪಣಜಿ: ಮುಂಬೈ-ಗೋವಾ ಹೆದ್ದಾರಿ ವಿಸ್ತರಣೆ ಕಾಮಗಾರಿ ಸುಮಾರು 15 ವರ್ಷಗಳ ಕಾಲ ವಿಳಂಬವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಬುಧವಾರ ಪಣಜಿಯ ಪೋರ್ವೊರಿಮ್‌ನಲ್ಲಿ ಮೇಲ್ಸೇತುವೆ ರಸ್ತೆ ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಮುಂಬೈ-ಗೋವಾ ಹೆದ್ದಾರಿ ಯೋಜನೆ ಇಷ್ಟೊಂದು ವಿಳಂಬವಾಗಿರುವುದಕ್ಕೆ ಬೇಸರವಿದೆ.
ಹೆದ್ದಾರಿ ಉದ್ಘಾಟನೆಗೆ ನಾನು ಬರುವುದಿಲ್ಲ' ಎಂದು ಹೇಳಿದ್ದಾರೆ.
'ಉದ್ಘಾಟನಾ ಸಮಾರಂಭಕ್ಕೆ ಬರದಿದ್ದರೂ ರಸ್ತೆ ಮಾರ್ಗವಾಗಿ ಪ್ರಯಾಣಿಸಿ ಕಾಮಗಾರಿಯನ್ನು ಪರಿಶೀಲಿಸುತ್ತೇನೆ. ಪ್ರಯಾಣಿಕರಿಗೆ ಈ ರಸ್ತೆ ಎಷ್ಟು ಅನುಕೂಲಕರವಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಿದೆ' ಎಂದಿದ್ದಾರೆ.
ಮೂಲಸೌಕರ್ಯ ಯೋಜನೆಗಳ ವಿಳಂಬ ಹಾಗೂ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವುದರ ಜೊತೆಗೆ ಸಂಬಂಧಿತ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವುದಾಗಿ ಗಡ್ಕರಿ ತಿಳಿಸಿದ್ದಾರೆ.

