ಬದಿಯಡ್ಕ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಭಾಗವಾಗಿ ಬದಿಯಡ್ಕ ಗ್ರಾಮ ಪಂಚಾಯತಿ ಬಿಜೆಪಿ 5 ನೇ ವಾರ್ಡ್ ಸಮಿತಿಯ ನೇತೃತ್ವದಲ್ಲಿ ನೀರಿನ ವ್ಯವಸ್ಥೆ ಇಲ್ಲದ ಬಾಂಜತ್ತಡ್ಕ ಇಕ್ಕೇರಿ ಎಸ್.ಸಿ ಉನ್ನತಿಯ 8 ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಶಂಕರ ಉದ್ಘಾಟಿಸಿದರು. ಅವರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನವನ್ನು ಸೇವಾ ವಾರವಾಗಿ ಆಚರಿಸುವ ಮೂಲಕ, ಕುಡಿಯುವ ನೀರಿನಂತಹ ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದ ಬಾಂಜತ್ತಡ್ಕ ಇಕ್ಕೇರಿ ಪರಿಶಿಷ್ಟ ಜಾತಿ ಉನ್ನತಿ 8 ಕುಟುಂಬಗಳಿಗೆ ಸಿಹಿ ನೀರು ಒದಗಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಬಿಜೆಪಿ ವಾರ್ಡ್ ಸಮಿತಿಯ ಈ ಕಾಳಜಿ ಇತರರಿಗೂ ಮಾದರಿಯಾಗಿದೆ. ಉನ್ನತಿಯ ಸಮಗ್ರ ಅಭಿವೃದ್ಧಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಗ್ರಾಮ ಪಂಚಾಯಿತಿ ವಹಿಸಿಕೊಳ್ಳಲಿದೆ ಎಂದು ಭರವಸೆ ನೀಡಿ ಅಗತ್ಯ ಮಾಹಿತಿಯನ್ನು ಪಡೆದುಕೊಂಡರು.
ಬಿಜೆಪಿ ಬದಿಯಡ್ಕ ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಮುಂಡೋಳುಮೂಲೆ ಮಾತನಾಡಿ ನೀರಿನ ಸೌಕರ್ಯವಿಲ್ಲದೆ ಪರದಾಡುತ್ತಿದ್ದ ಬಾಂಜತ್ತಡ್ಕ ಇಕ್ಕೇರಿ ಎಸ್.ಸಿ ಉನ್ನತಿಯ 8 ಕುಟುಂಬಗಳ ದಶಕಗಳ ಸಮಸ್ಯೆಗೆ ಸ್ಪಂದಿಸಿ, ತಕ್ಷಣವೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದು ಪಂಚಾಯತಿ ಹಾಗೂ ಪಕ್ಷದ ವಾರ್ಡ್ ಸಮಿತಿಯ ಅಭಿವೃದ್ಧಿ ಕಾಳಜಿಯನ್ನು ತೋರಿಸುತ್ತದೆ. ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಸೌಕರ್ಯಗಳನ್ನು ತಲುಪಿಸುವುದೇ ನಮ್ಮ ಪ್ರಮುಖ ಉದ್ದೇಶವಾಗಿದ್ದು, ಪಕ್ಷದ ಕಾರ್ಯಕರ್ತರು ಇಂತಹ ಅನೇಕ ಜನಪರ ಕೆಲಸಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ ಎಂದು ಹೇಳಿದರು. ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಗ್ರಾಮ ಪಂಚಾಯಿತಿ ಸದಸ್ಯ ಶ್ಯಾಮಪ್ರಸಾದ ಸರಳಿ, ಬಿಜೆಪಿ ಪಂಚಾಯಿತಿ ಸಮಿತಿ ಅಧ್ಯಕ್ಷ ಉದನೇಶ್ವರ, ಪ್ರಧಾನ ಕಾರ್ಯದರ್ಶಿ ಶರತ್ ಶೆಟ್ಟಿ, ವಾರ್ಡಿನ ಪ್ರಮುಖ ಕಾರ್ಯಕರ್ತರಾದ ಸುನಿಲ್ ಕಿನ್ನಿಮಾಣಿ, ಕುಮಾರ ಇಕ್ಕೇರಿ, ದಾಮೋದರ ಚೆಟ್ಟಿಯಾರ್, ನೇಮಿರಾಜ್, ಮಂಜುನಾಥ ಇಕ್ಕೇರಿ, ಕೃಷ್ಣ ಪ್ರಸಾದ ಬಾಂಜತ್ತಡ್ಕ ಮೊದಲಾದವರು ನೇತೃತ್ವ ವಹಿಸಿದ್ದರು.

.jpg)
.jpg)
