ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳು ರಾಷ್ಟ್ರೀಯ ಕ್ರೀಡಾ ಆಡಳಿತ ಕಾಯ್ದೆ (2025)ಯ ವ್ಯಾಪ್ತಿಗೆ ಏಕೆ ಒಳಪಡಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ಪೀಠವು ಬಿಸಿಸಿಐ ವಿಷಯಕ್ಕೆ ಸಂಬಂಧಿಸಿ ಕೆಲವು ರಾಜ್ಯ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿತು.
ಈಗ ಜಾರಿಯಲ್ಲಿರುವ 2025ರ ಕ್ರೀಡಾಡಳಿತ ಕಾಯ್ದೆಯ ಸೇವಾ ನಿಯಮಗಳು ಮತ್ತು ಷರತ್ತುಗಳನ್ನುತಮ್ಮ ಪದಾಧಿಕಾರಿಗಳಿಗೆ ಯಾಕೆ ಅನ್ವಯಿಸಬಾರದು ಎಂಬುದರ ಕುರಿತು ಸೂಚನೆಗಳನ್ನು ಪಡೆಯುವಂತೆ ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪರ ಹಾಜರಾಗಿದ್ದ ವಕೀಲರಿಗೆ ಪೀಠವು ಸೂಚಿಸಿತು.
ಈ ಹಿಂದೆ ಸುಪ್ರೀಂ ಕೋರ್ಟ್, ಬಿಸಿಸಿಐ ನಿಯಮಾ ವಳಿಗಳಲ್ಲಿ ಸುಧಾರಣೆಗಳನ್ನು ತರಲು ಸುಪ್ರೀಂ ಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯ ಶಿಫಾರಸುಗಳನ್ನು ಕೋರ್ಟ್ ಅಂಗೀಕರಿಸಿತ್ತು.
2022ರಲ್ಲಿ ನಿಯಮಗಳಲ್ಲಿ ಬದಲಾವಣೆಗೆ ಅವಕಾಶ ನೀಡಿತು. ಇದರ ಅನ್ವಯ ಪದಾಧಿಕಾರಿಗಳಿಗೆ ಸತತ 12 ವರ್ಷ (ರಾಜ್ಯ ಸಂಸ್ಥೆಗಳಲ್ಲಿ ಆರು ಮತ್ತು ಬಿಸಿಸಿಐನಲ್ಲಿ ಆರು ವರ್ಷ) ಅಧಿಕಾರ ನಡೆಸಿದ ನಂತರ ಮೂರು ವರ್ಷಗಳ 'ಕೂಲಿಂಗ್ ಆಫ್' ಅವಧಿಯನ್ನು ಕಡ್ಡಾಯಗೊಳಿಸಲಾಗಿತ್ತು.

