ಎಲ್ ಮುಂಡೋ ತೀರ್ಪುಗಾರರ ಸಮಿತಿಯು ʼಪತ್ರಿಕಾ ಸ್ವಾತಂತ್ರ್ಯʼ ವಿಭಾಗದಲ್ಲಿ ವರದರಾಜನ್ ಅವರನ್ನು ಹಾಗೂ ಪತ್ರಿಕೋದ್ಯಮದಲ್ಲಿ ಅತ್ಯುತ್ತಮ ಸಾಧನೆಗಾಗಿ ತುರಾಟಿ ಅವರನ್ನು ಆಯ್ಕೆ ಮಾಡಿದೆ.
2027ರ ಫೆಬ್ರವರಿಯಲ್ಲಿ ಇವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಈ ಪ್ರಶಸ್ತಿಯು ʼದಿ ವೈರ್ʼ ಮಾಧ್ಯಮ ಮತ್ತು ಭಾರತದಲ್ಲಿನ ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಜವಾದ ಉತ್ತೇಜನ ನೀಡಲಿದೆ ಎಂದು ವರದರಾಜನ್ ಅವರು ತಿಳಿಸಿದ್ದಾರೆ.
ಎಲ್ ಮುಂಡೋ(El Mundo) ಸ್ಪೇನ್‌ನ ಅತಿ ದೊಡ್ಡ ಪತ್ರಿಕೆಯಾಗಿದೆ. ಎಲ್ ಮುಂಡೋ ಅಂತಾರಾಷ್ಟ್ರೀಯ ಪತ್ರಿಕೋದ್ಯಮ ಪ್ರಶಸ್ತಿಗಳನ್ನು 2002ರಿಂದ ನೀಡಲಾಗುತ್ತಿದೆ. ಎಲ್ ಮುಂಡೋ ಪತ್ರಿಕೆಯ ಇಬ್ಬರು ಪತ್ರಕರ್ತರಾದ ಜೋಸೆ ಲೂಯಿಸ್ ಲೋಪೆಜ್ ಡೆ ಲಕಾಲೆ ಮತ್ತು ಜೂಲಿಯೊ ಫುವೆಂಟೆಸ್ ಅವರ ಹತ್ಯೆಯ ಹಿನ್ನೆಲೆ ಅವರ ನೆನಪಿಗಾಗಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
The Wire ಸಂಪಾದಕರಾಗಿರುವ ಸಿದ್ಧಾರ್ಥ್ ವರದರಾಜನ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಸಿದ್ಧಾರ್ಥ್ ವರದರಾಜನ್ 1990ರ ದಶಕದಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಸೇರಿದ್ದರು. ಬಳಿಕ ಕಾಶ್ಮೀರ ಸಂಘರ್ಷ, ಇರಾಕ್ ಯುದ್ಧ ಕುರಿತು ವರದಿ ಮಾಡಿದ್ದರು.
ವರದರಾಜನ್ ಅವರ ವರದಿಗಳು ಆಡಳಿತಾರೂಢ ಬಿಜೆಪಿ ಸರಕಾರದ ಕೆಂಗಣ್ಣಿಗೆ ಗುರಿಯಾಗಿದೆ. 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಕಟವಾದ ವರದಿಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ಎರಡು ದೂರುಗಳನ್ನು ದಾಖಲಿಸಿದ್ದರು.

