ನವದೆಹಲಿ: ಪಾಕಿಸ್ತಾನದೊಂದಿಗಿನ ರಾಜತಾಂತ್ರಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಅಮಾನತಿನಲ್ಲಿಟ್ಟಿದ್ದ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಎತ್ತಿಹಿಡಿದ 'ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯ'ದ (ಸಿಒಎ) ಆದೇಶವನ್ನು ಭಾರತ ಸೋಮವಾರ ಸಂಪೂರ್ಣವಾಗಿ ತಿರಸ್ಕರಿಸಿದೆ.
'ದಿ ಹೇಗ್' ಮೂಲದ ನ್ಯಾಯಾಲಯದ ತೀರ್ಪಿಗೆ ಪ್ರತಿಕ್ರಿಯಿಸಿದ ಭಾರತೀಯ ವಿದೇಶಾಂಗ ಸಚಿವಾಲಯವು, 'ಸಿಂಧೂ ನದಿ ನೀರು ಹಂಚಿಕೆ ಒಪ್ಪಂದವನ್ನು ಅಮಾನತಿನಲ್ಲಿಡುವ ಭಾರತದ ನಿರ್ಧಾರವು ಜಾರಿಯಲ್ಲೇ ಇರುತ್ತದೆ' ಎಂದು ಸ್ಪಷ್ಟಪಡಿಸಿದೆ.
2025ರ ಏಪ್ರಿಲ್ 22ರಂದು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತವು ಹಲವು ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿರಿಸಿದೆ. ಸಿಂಧೂ ನದಿ ಹಾಗೂ ಅವುಗಳ ಉಪನದಿಗಳ ನೀರು ಹಂಚಿಕೆ ಹಾಗೂ ಬಳಕೆಗೆ ಸಂಬಂಧಿಸಿ 1960ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಒಪ್ಪಂದ ನಡೆದಿತ್ತು.
ಭಾರತವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತಿನಲ್ಲಿಡುವುದರ ಜತೆಗೆ, ಅಟ್ಟಾರಿಯಲ್ಲಿನ ಚೆಕ್ಪೋಸ್ಟ್ ಮುಚ್ಚುವುದು, ವೀಸಾಗಳನ್ನು ನಿರ್ಬಂಧಿಸುವುದು ಮತ್ತು ಆಯಾ ರಾಯಭಾರ ಕಚೇರಿಗಳಲ್ಲಿ ರಾಜತಾಂತ್ರಿಕ ಮತ್ತು ಅಧಿಕೃತ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸುವುದು ಸೇರಿದಂತೆ ಹಲವು ರಾಜತಾಂತ್ರಿಕ ಕ್ರಮಗಳನ್ನು ಕೈಗೊಂಡಿತ್ತು.

