ಅಹಮದಾಬಾದ್: ಗುಜರಾತ್‌ನ ಹಳ್ಳಿಗಳಲ್ಲಿ ಕುಡಿಯುವ ನೀರಿನ ಗುಣಮಟ್ಟ ತೀರಾ ಕಳಪೆಯಾಗಿದೆ ಎಂಬುದು ಮಹಾಲೇಖಪಾಲರ (ಸಿಎಜಿ) ವರದಿಯಿಂದ ಬಹಿರಂಗವಾಗಿದೆ.
ವಿಧಾನಸಭೆಯಲ್ಲಿ ಮಂಡಿಸಲಾಗಿರುವ ವರದಿಯಲ್ಲಿ, ರಾಜ್ಯದ ಸುಮಾರು 48 ಹಳ್ಳಿಗಳ, 960 ಜನರನ್ನು ಸಮೀಕ್ಷೆ ಒಳಪಡಿಸಲಾಗಿದೆ.
ಈ ವೇಳೆ ನಡೆಸಲಾದ ಪರೀಕ್ಷೆಯಲ್ಲಿ ಸುಮಾರು ಶೇ 89ರಷ್ಟು (ಅಂದರೆ ಪ್ರತಿ 10ರಲ್ಲಿ 9 ಪರೀಕ್ಷೆಯಲ್ಲಿ) ನೀರು ಕುಡಿಯಲು ಯೋಗ್ಯವಲ್ಲ ಎಂದು ಉಲ್ಲೇಖಿಸಲಾಗಿದೆ.
2019-20ರಿಂದ 2023-24ರವರೆಗಿನ 'ಜಲಜೀವನ್ ಮಿಷನ್' (ಜೆಜೆಎಂ) ಅನುಷ್ಠಾನ ಪರಿಶೀಲಿಸಿದ ನಂತರ ಈ ವರದಿ ಪ್ರಕಟಿಸಲಾಗಿದೆ.
'ಪರೀಕ್ಷೆಗೆ ಒಳಪಡಿಸಿದ ಗ್ರಾಮಗಳಿಂದ ಸಂಗ್ರಹಿಸಲಾದ 88 ನೀರಿನ ಮಾದರಿಗಳ ಪೈಕಿ 10 ಮಾದರಿಗಳಷ್ಟೇ (ಶೇ 11.36 ಮಾತ್ರ) ಕುಡಿಯಲು ಯೋಗ್ಯ ಹಾಗೂ ಉಳಿದ 78 (ಶೇ 88.64) ಮಾದರಿಗಳು ಯೋಗ್ಯವಲ್ಲ ಎಂಬುದು ಕಂಡುಬಂದಿದೆ' ಎಂದು ತಿಳಿಸಲಾಗಿದೆ.
ಅಮ್ರೇಲಿ, ಆನಂದ್, ಭರೂಚ್, ದಾಹೋದ್, ಗಾಂಧಿನಗರ ಮತ್ತು ಪಟಾಣ್ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದೆ.
ನೀರಿನ ನಿರ್ವಹಣೆಗೆ ಸಂಬಂಧಿಸಿದಂತೆ ಹಳ್ಳಿಗಳಲ್ಲಿ ಮಾಡಿಕೊಳ್ಳಲಾಗಿರುವ ಸಮಿತಿಗಳಲ್ಲಿ ಗ್ರಾಮಸ್ಥರು, ಮಹಿಳೆಯರು, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು ಇರಬೇಕು ಎಂಬ ನಿಯಮವಿದೆ. ಆದರೆ, ಹಲವೆಡೆ ಪರಿಶಿಷ್ಟ ಜಾತಿಯ ಸದಸ್ಯರು ಇಲ್ಲದಿರುವುದು ತಿಳಿದುಬಂದಿದೆ. ಹೆಚ್ಚಿನ ಕಡೆ ಚುನಾಯಿತ ಸದಸ್ಯರಷ್ಟೇ ಸಮಿತಿಗಳಲ್ಲಿ ಇರುವುದೂ ಗೊತ್ತಾಗಿದೆ.
ವರದಿಗೆ ಪ್ರತಿಕ್ರಿಯಿಸಿರುವ ಸರ್ಕಾರ, ದೋಷ ಸರಿಪಡಿಸುವುದಾಗಿ ಭರವಸೆ ನೀಡಿದೆ.

